ಮಾಲೂರು ತಾ. 24 ಸರ್ಕಾರಿ ನೌಕರರ ಅವಿರೋಧ ಆಯ್ಕೆ
ಕ.ಪ್ರ.ವಾರ್ತೆ ಮಾಲೂರು ಜು. 17
ಜುಲೈ 22 ರಂದು ನಡೆಯಲಿರುವ ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 24 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 8 ಸ್ಥಾನಕ್ಕಾಗಿ 14 ಮಂದಿ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣೆ ಅಧಿಕಾರಿ ವಿ.ನಾರಾಯಣಪ್ಪ ತಿಳಿಸಿದ್ದಾರೆ.
ಅವರು ಕನ್ನಡಪ್ರಭದೊಂದಿಗೆ ಮಾತನಾಡುತ್ತ 3 ಸ್ಥಾನವಿರುವ(1011 ಮತದಾರರು) ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 6 ಮಂದಿ ಸ್ಪರ್ಧಾಳು, 2 ಸ್ಥಾನವಿರುವ(74 ಮತದಾರರು) ಕಂದಾಯ ಇಲಾಖೆಯಲ್ಲಿ ಮೂವರು, ಒಂದು ಸ್ಥಾನ(21ಮತದಾರರು) ವಿರುವ ಸಮಾಜ ಕಲ್ಯಾಣ ಇಲಾಖೆಯಿಂದ ಇಬ್ಬರು ಹಾಗೂ ಪ್ರೌಢಶಿಕ್ಷಣ ಇಲಾಖೆಯಲ್ಲಿ ಮೂರು ಮಂದಿ ಎರಡು ಸ್ಥಾನಕ್ಕಾಗಿ(229 ಮತದಾರರು) ಸ್ವರ್ಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಟಿ.ಕೆ.ಅಶ್ವಥ್ ನಾರಾಯಣ್ ಗೌಡ, ಆಂಜಿನಪ್ಪ, ಗುಂಡಪ್ಪ, ಚಂದ್ರಮ್ಮ, ಜಯರಾಮ್, ಸೋಮಶೇಖರಯ್ಯ ರವರು 3 ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದು, ಕಂದಾಯ ಇಲಾಖೆಯ ಜಯರಾಂ,ಬೀರಪ್ಪ ಹಾಗೂ ಸತ್ಯ ಪ್ರಕಾಶ್ ರವರು ಎರಡು ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಶ್ವಥಪ್ಪ ಹಾಗೂ ಪಿಳ್ಳಪ್ಪ ಇರುವ ಏಕೈಕ ಸ್ಥಾನಕ್ಕಾಗಿ ಸ್ಪರ್ಧೆ ನಡೆಸಿದರೆ ಪ್ರೌಢಶಾಲೆಯ ಸಿ.ಬಿ.ವೀರಭದ್ರಚಾರಿ, ವೆಂಕಟಸ್ವಾಮಿ, ಶ್ರೀನಿವಾಸ್ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದ ಚುನಾವಣಾಧಿಕಾರಿ, ಚುನಾವಣೆ 22 ರ ಸೋಮವಾರ ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಬೆ. 11 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ಮತದಾನ ನಂತರ ಮತಗಳ ಏಣಿಕೆ ನಡೆದು ಫಲಿತಾಂಶ ಸಹ ಘೋಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.