ಹಣ್ಣು ಸಂಸ್ಕರಣ ಘಟಕದಿಂದ ಪರಿಸರಕ್ಕೆ ಕುತ್ತು; ರೈತ ಸಂಘ ದೂರು
ಕ.ಪ್ರ.ವಾರ್ತೆ ಕೋಲಾರ ಜು.17
ತಾಲೂಕಿನ ವೇಮಗಲ್ ಹೋಬಳಿಗೆ ಸೇರಿದ ಮೇಡಿಹಾಳ ಗೇಟ್ ಸ್ಥಾಪಿಸಿರುವ ಖಾಸಗಿ ಐ.ಕ್ಯೂ.ಎಫ್ ಫುಡ್ ಮತ್ತು ಜ್ಯೂಸ್ ಫ್ಯಾಕ್ಟರಿಯಿಂದ ಸುತ್ತ ಮುತ್ತಲಿನ ಪರಿಸರ ಹಾಳಾಗುತ್ತಿದೆ ಎಂದು ರೈತ ಸಂಘ ದೂರಿದೆ.
ಹಣ್ಣು ಸಂಸ್ಕರಣ ಘಟಕದಿಂದ ಪ್ರತಿನಿತ್ಯ ಹೊರ ಬರುವ ತ್ಯಾಜ್ಯ ಕಾರ್ಖಾನೆಯ ಸುತ್ತಮುತ್ತಲ ಜಮೀನುಗಳಿಗೆ ಹರಿಯುತ್ತಿರುವುದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿರುವುದಲ್ಲದೆ, ರೈತರು ನಷ್ಟ ಹೊಂದುವಂತಾಗಿದೆ ಎಂದು ಆರೋಪಿಸಿದ್ದಾರೆ.
ರೈತರ ದೂರಿನ ಮೇರೆಗೆ ರೈತ ಸಂಘದ ಪದಾಧಿಕಾರಿಗಳು ಹಣ್ಣು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಮ್ಯಾನೇಜರ್ ಘಟಕದಲ್ಲಿ ಶುಚಿತ್ವ ಕಾಪಾಡುತ್ತಿದ್ದೇವೆ. ತ್ಯಾಜ್ಯ ವಸ್ತುಗಳನ್ನು ರೈತರ ಜಮೀನು ಮತ್ತು ಸರ್ಕಾರಿ ಜಮೀನುಗಳಲ್ಲಿ ಹಾಕುವಂತೆ ಪರಿಸರ ಇಲಾಖೆಯ ಅಧಿಕಾರಿಗಳು ನಮಗೆ ಅನುಮತಿ ನೀಡಿದ್ದಾರೆಂಬ ಉತ್ತರ ನೀಡಿದ್ದು, ಈ ರೀತಿಯ ಹೇಳಿಕೆ ನೀಡುವುದಕ್ಕೆ ಅಧಿಕಾರಿಗಳು ಕಂಪನಿಯ ಜತೆ ಶಾಮೀಲು ಆಗಿರುವುದೇ ಕಾರಣವೆಂದು ಆರೋಪಿಸಿದ್ದಾರೆ.
ಕೂಡಲೇ ತ್ಯಾಜ್ಯ ವಸ್ತುಗಳನ್ನು ಸೂಕ್ತ ಸ್ಥಳದಲ್ಲಿ ಹಾಕಲು ಪರಿಸರ ಅಧಿಕಾರಿಗಳು ಹಣ್ಣು ಸಂಸ್ಕರಣ ಘಟಕದ ಮಾಲೀಕರಿಗೆ ಸೂಚನೆ ನೀಡಬೇಕೆಂದು ರೈತ ಸಂಘದ ಮುಖಂಡರಾದ ಕೆ. ಶ್ರೀನಿವಾಸಗೌಡ, ಕೆ.ನಾರಾಯಣಗೌಡ, ಹೂಹಳ್ಳಿ ನಾಗರಾಜ್, ಹುಲ್ಕೂರು ಹರಿಕುಮಾರ್ ವೇಮಗಲ್ ಅಮರನಾರಾಯಣಸ್ವಾಮಿ, ನೀಲಕಂಠಪುರ ಮುನೇಗೌಡ ಇನ್ನಿತರರು ಒತ್ತಾಯಿಸಿದ್ದಾರೆ.