ಅನ್ನಭಾಗ್ಯಕ್ಕೆ ಹೆಚ್ಚುವರಿ ಹಣ ವಿರೋಧಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ, ಕೋಲಾರ/ಮುಳಬಾಗಿಲು,ಜು.18
ರಾಜ್ಯ ಸರ್ಕಾರ ಜುಲೈ ತಿಂಗಳ 10ರಿಂದ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿ.ಪಿ.ಎಲ್. ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಅಕ್ಕಿಯನ್ನು ಒಂದು ರುಪಾಯಿಗೆ 1 ಕೆ.ಜಿ.ಯಂತೆ ವಿತರಣೆ ಮಾಡುತ್ತಿರುವ ಅಕ್ಕಿಗೆ ಮುಳಬಾಗಿಲು ತಾಲೂಕಿನ ಚೆನ್ನಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಮಾಲೀಕರೊಬ್ಬರು ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸರ್ಕಾರದ ಆದೇಶದ ಪ್ರಕಾರ ಅನ್ನಭಾಗ್ಯ ಯೋಜನೆಯಡಿ ಇಬ್ಬರಿಗೆ 20 ಕೆ.ಜಿ, ಮೂರಕ್ಕಿಂತ ಹೆಚ್ಚಿನ ಮಂದಿ ಇರುವವರಿಗೆ 30 ಕೆ.ಜಿ ಅಕ್ಕಿಯನ್ನು ನೀಡಬೇಕಾಗಿದ್ದು ತಾಲೂಕಿನ ಅಂಗೊಂಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಚೆನ್ನಾಪುರ ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ಪ್ರತಿ ಕೆ.ಜಿ 2 ರು. ನಂತೆ ಪಡೆಯುತ್ತಿದ್ದು ಇಬ್ಬರಿದ್ದರೆ 10 ಕೆ.ಜಿ ಅಕ್ಕಿ ನೀಡಿ 20 ರು.ಗಳನ್ನು ತೆಗೆದುಕೊಳ್ಳುತ್ತಾರೆ, 3 ಜನಕ್ಕಿಂತ ಹೆಚ್ಚಿರುವ ಚೀಟಿದಾರರಿಗೆ 20 ಕೆ.ಜಿ. ನೀಡಿ 40 ರು. ಪಡೆಯುತ್ತಾರೆ ಎಂದು ದೂರಿದರು.
ಚೆನ್ನಾಪುರ, ಗಾಂಧೀಪುರ, ಶೇಷಾಪುರ, ರೆಡ್ಡಹಳ್ಳಿ, ಬೊಮ್ಮಸಂದ್ರ, ಯಡಹಳ್ಳಿ ಗ್ರಾಮಗಳ ಪಡಿತರ ಚೀಟಿದಾರರು ಚೆನ್ನಾಪುರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಬೇಕಾಗಿದ್ದು ಸದರಿ ನ್ಯಾಯಬೆಲೆ ಅಂಗಡಿ ಮಾಲೀಕರು ಹೆಚ್ಚಿಗೆ ಹಣವನ್ನು ಪಡೆದು ಕಡಿಮೆ ಅಕ್ಕಿಯನ್ನು ವಿತರಿಸುತ್ತಾರೆ, ಕೇಳಿದರೆ ಬಡ ಪಡಿತರ ಚೀಟಿದಾರರಿಗೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆಂದು ಆರೋಪಿಸಿದರಲ್ಲದೆ, ಇವರ ಬಳಿಯೇ ಬೋಗಸ್ ಕಾರ್ಡ್ಗಳು ಸಾಕಷ್ಟು ಇದ್ದು ಅದರಿಂದ ಅಕ್ಕಿಯನ್ನು ಸ್ವಂತಕ್ಕೆ ಬಳಸಿಕೊಳ್ಳುರುವುದರಿಂದ ಸದರಿ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಉಪ ತಹಶೀಲ್ದಾರ್ ಮುನಿವೆಂಕಟಪ್ಪ, ಆಹಾರ ನಿರೀಕ್ಷಕ ಕೊಂಡಪ್ಪ, ಮನವಿಯನ್ನು ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಚೆನ್ನಾಪುರ ಕೃಷ್ಣೆಗೌಡ, ಯುವ ಕಾಂಗ್ರೆಸ್ ಪ್ರ ಧಾನ ಕಾರ್ಯದರ್ಶಿ ಕೆ.ಕೋದಂಡರಾಮು, ಜಯತೀರ್ಥ, ಕೆ.ಎಂ.ಮುನಿಯಪ್ಪ ಗಾಂಧಿಪುರ, ಸುರೇಶ್, ಜಯಪ್ಪ, ಶಂಕರಪ್ಪ ಸುರೇಶ್, ಸತೀಶ್, ವೆಂಕಟೇಶ್ಗೌಡ, ಯಲುವಹಳ್ಳಿ ವೇಣು, ವಿದ್ಯಾರ್ಥಿ ಮುಖಂಡರಾದ ಗುಜ್ಜಮಾರಂಡಹಳ್ಳಿ ವಿ.ಮುನಿರಾಜು, ಮೋಹನ್, ಅಶೋಕ್, ಸುಭಾಷ್, ರೈತ ಸಂಘದ ಮುಖಂಡರಾದ ನಾರಾಯಣಗೌಡ, ಮುನೇಗೌಡ, ಗೊಟ್ಟಿಕುಂಟೆ ಕೃಷ್ಣ, ರಂಜಿತ್ಕುಮಾರ್, ವಿಕ್ರಂ, ಭರತ್, ಆನಂದ ಸಾಗರ, ಶ್ರೀನಾಥ್ ಮುಂತಾದವರು ಇದ್ದರು.