ಕರುನಾಡಲ್ಲಿ ಹುಟ್ಟಿದವರಿಗೇ ಕನ್ನಡ ಮೇಲಿನ ಪ್ರೀತಿ ಇಲ್ಲ
ಚಿಕ್ಕಬಳ್ಳಾಪುರ: ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗೇನೇ ಕನ್ನಡ ಮೇಲಿನ ಅಭಿಮಾನ, ಪ್ರೀತಿ ಕಡಿಮೆಯಾಗುತ್ತಿದೆ ಎನ್ನುವಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದರು.
ನಗರದ ಹೊರ ವಲಯದಲ್ಲಿರುವ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
1956 ಭಾಷಾ ಆಧಾರದ ರಾಜ್ಯಗಳ ವಿಂಗಡಣೆ ಆಯಿತು. ಆದರೆ ನಂತರ ಕರ್ನಾಟಕಕ್ಕೆ ಮಾತ್ರ ಕನ್ನಡ ಭಾಷೆ ಅನುಷ್ಠಾನದ ವಿಷಯದಲ್ಲಿ ತೊಡಕುಂಟಾಯಿತು. ಇನ್ನೂ ಇಲ್ಲಿಗೆ ಬರುವ ಐಎಎಸ್ ಅಧಿಕಾರಿಗಳು ಸಹ ಹೆಚ್ಚಿಗೆ ಬೇರೆ ರಾಜ್ಯದವರಾಗಿದ್ದು, ಆಡಳಿತವು ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಸುಮಾರು 6 ಕೋಟಿ ಜನಸಂಖ್ಯೆಯಿದ್ದು, ಬೆಂಗಳೂರಿನಲ್ಲಿ 1 ಕೋಟಿ ಜನಸಂಖ್ಯೆಯಿದ್ದು ಅವರಲ್ಲಿ ಶೇ.78 ರಷ್ಟು ಜನ ಕನ್ನಡೇತರು ಹಾಗೂ ಶೇ.22 ರಷ್ಟು ಮಾತ್ರ ಕನ್ನಡಿಗರು ಇದ್ದಾರೆ. ಕನ್ನಡನಾಡಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ.ಇಲ್ಲಿ ಕನ್ನಡ ಭಾಷಾ ಮಾಧ್ಯಮದಲ್ಲಿ ಕಡ್ಡಾಯ ಶಿಕ್ಷಣ ಇನ್ನೂ ಮರೀಚಿಕೆಯಾಗಿ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗಡಿಭಾಗದಲ್ಲಿ ಅನ್ಯ ರಾಜ್ಯಗಳ ಭಾಷಾ ಪ್ರಭಾವದಿಂದ ಕನ್ನಡ ಭಾಷೆ ಕ್ಷೀಣಿಸುತ್ತಿದೆ. ಬೇರೆ ರಾಜ್ಯಗಳ ಜನರಿಗೆ ಇರುವ ಭಾಷಾ ಪ್ರೀತಿ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲಿಲ್ಲ. ಇಂಗ್ಲೀಷ್ ವ್ಯಾಮೋಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದ ಅವರು, ಪ್ರತಿ 15 ದಿವಸಕ್ಕೆ ಒಂದು ಭಾಷೆ ಸಾಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಭಾಷೆಯ ಬಗ್ಗೆ ನಾವೇ ಅಭಿಮಾನ ಬೆಳೆಸಿಕೊಳ್ಳದಿದ್ದರೆ ನಮ್ಮ ಬದುಕು ವ್ಯರ್ಥ. ಆದ್ದರಿಂದ ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಕೋಡಿರಂಗಪ್ಪ, ಉಪನ್ಯಾಸಕ ಡಾ. ಜಿ.ಎಂ. ಶ್ರೀನಿವಾಸಯ್ಯ ಸ್ಥಳೀಯ ಸಂಸ್ಕತಿಯ ವೈಶಿಷ್ಟ್ಯತೆಯ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಜ್ಞ ಸಂಚಾಲಕ ಡಾ. ರಂಗಾರೆಡ್ಡಿ ಕೋಡಿರಾಂಪುರ, ಕಾರ್ಯದರ್ಶಿ ಡಾ.ಕೆ. ಮುರಳೀಧರ ಮುಂತಾದವರು ಉಪಸ್ಥಿತರಿದ್ದರು.