ತಾಲೂಕುಗಳಲ್ಲಿ ಮಹಿಳಾ ಪೊಲೀಸ್ ಠಾಣೆ ತೆರೆಯಿರಿ
ಕ.ಪ್ರ. ವಾರ್ತೆ, ಕೋಲಾರ, ಜು.18
ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಬೇಕು, ಪ್ರತಿ 3 ವರ್ಷಕ್ಕೊಮ್ಮೆ ಪುರುಷ, ಮಹಿಳಾ ಎಲ್ಲಾ ಪೊಲೀಸರಿಗೂ ಕಡ್ಡಾಯ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯು ರಾಜ್ಯ ಸರ್ಕಾರನ್ನು ಒತ್ತಾಯಿಸಿದೆ.
ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ವಕೀಲ ಕೆ. ನರೇಂದ್ರಬಾಬು ಹಾಗೂ ಕಾರ್ಯಕರ್ತರು ಗುರುವಾರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಹಿಳೆಯರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರೇ ಇರುವ ಪೊಲೀಸ್ ಠಾಣೆಗಳಿಗೆ ದೂರು ನೀಡುವುದಕ್ಕೆ ಹೋಗಲು ತುಂಬಾ ಮುಜುಗರವಾಗುತ್ತಿದೆ. ಹಾಗಾಗಿ ಎಷ್ಟೋ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಲು ಹತ್ತದೇ ಮುಚ್ಚಿ ಹೋಗುತ್ತಿವೆ. ಇದರಿಂದ ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯ, ಹಿಂಸೆ, ಅನ್ಯಾಯ ನಿರಂತರವಾಗಿ ಮುಂದುವರೆದಿರುವುದರಿಂದ ಮಹಿಳಾ ಪೊಲೀಸ್ ಠಾಣೆಗಳು ಅವಶ್ಯಕವೆಂದು ಆಗ್ರಹಿಸಿದ್ದಾರೆ.
ಮಹಿಳಾ ಆರೋಪಿಯನ್ನು ಮಹಿಳಾ ಪೇದೆಯೇ ದಸ್ತಗಿರಿ ಮಾಡಬೇಕು. ಇವರನ್ನು ಮಹಿಳಾ ಪೇದೆಯೇ ಠಾಣೆಗೆ ಕರೆ ತರಬೇಕು. ಮಹಿಳೆಯರನ್ನು ಪೊಲೀಸ್ ಠಾಣೆಗಳಲ್ಲಿ ರಾತ್ರಿ ವೇಳೆ ಇಟ್ಟುಕೊಳ್ಳಬಾರದು ಎಂಬ ಅನೇಕ ನಿಯಮಗಳಿದ್ದರೂ ಪರಿಪಾಲನೆ ಆಗುತ್ತಿಲ್ಲ. ಕಾನೂನು ಉಲ್ಲಂಘನೆ ರಾಜಾರೋಷವಾಗಿ ನಡೆಯುತ್ತಿರುವುದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಅನೇಕ ಪ್ರಕರಣಗಳಲ್ಲಿ ಪೊಲೀಸರು ದೂರು ದಾಖಲಿಸಲು ಸತಾಯಿಸುವುದು, ದೂರು ದಾಖಲಿಸುವ ಬದಲಾಗಿ ಎದುರುದಾರನೊಡನೆ ಶಾಮೀಲಾಗಿ ದೂರುದಾರನಿಗೆ ದೂರು ವಾಪಸ್ ಪಡೆಯುವಂತೆ ಒತ್ತಡ, ಬೆದರಿಕೆ ಹಾಕುವುದು, ಲಂಚಕ್ಕೆ ಪೀಡಿಸುವುದು, ಎಫ್.ಐ.ಆರ್ ಪ್ರತಿಗೂ ದುಡ್ಡು ವಸೂಲಿ ಮಾಡುವುದು, ಚಾರ್ಜ್ಶೀಟ್ನಲ್ಲಿ ಆರೋಪಿಗಳ ಹೆಸರು ಬಿಡುವುದು, ರಾಜಕೀಯ ಪುಡಾರಿಗಳ ಮಧ್ಯಸ್ಥಿಕೆಗೆ ಅವಕಾಶ ಮಾಡಿಕೊಡುವ ಆರೋಪವಿರುವುದರಿಂದ ಮಹಿಳೆಯರಿಗೆ ನ್ಯಾಯ ಒದಗಿಸಲು ಮತ್ತು ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಬೇಕೆಂದು ತಿಳಿಸಿದ್ದಾರೆ. ಕೋಲಾರ ನಗರವು ಅವ್ಯಾಹತವಾಗಿ ಅಭಿವೃದ್ಧಿಗೊಳ್ಳುತ್ತಿರುವ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಜನಸಂಖ್ಯೆ ಪ್ರತಿ ವರ್ಷವೂ ಶೇ.18 ಹೆಚ್ಚಳವಾಗುತ್ತಿದೆ. ಇದೇ ರೀತಿ ಇಲ್ಲಿನ ಅಪರಾಧ ಪ್ರಮಾಣದಲ್ಲಿಯೂ ಏರಿಕೆಯಾಗಿದೆ. ಆದರೂ ಇಲ್ಲಿಗೊಂದು ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆ ಇಲ್ಲವಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ವೇದಿಕೆಯ ಮುಖಂಡರು ದೂರಿದ್ದಾರೆ. ಈ ಸಂದರ್ಭದಲ್ಲಿ ಕೆ.ಸುಮನ್, ಸೋಮಶೇಖರ್, ಲಕ್ಷ್ಮೀಪತಿ, ಎಸ್.ಓ. ಮಂಜುನಾಥ್, ದಿಂಬ ಜಯರಾಮ್ ಇದ್ದರು.