ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರೀಕ್ಷೆಗೆ ಹಾಜರ್.. ಫಲಿತಾಂಶದಲ್ಲಿ ಗೈರು..

Rashmi Kasaragodu
Updated On : 19 Jul 2013, 12:34 pm

ಕ.ಪ್ರ.ವಾರ್ತೆ   ಕೋಲಾರ   ಜು. 18
ಪ್ರತಿವರ್ಷ ಪರೀಕ್ಷೆಗಳ ಇಲ್ಲವೇ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲಿ ಒಂದಲ್ಲ ಒಂದು ಎಡವಟ್ಟು ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಬೆಂಗಳೂರು ವಿಶ್ವ ವಿದ್ಯಾನಿಲಯವು 2012-13ನೇ ಸಾಲಿನ ಅಂತಿಮ ವರ್ಷದ ಬಿ.ಎಸ್.ಸಿ ಮತ್ತು ಬಿಬಿಎಂ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲೂ ಲೋಪವೆಸಗುವ ಮೂಲಕ ಟೀಕೆಗೆ ಗುರಿಯಾಗಿದೆ.
ಕೋಲಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಅಂತಿಮ ವರ್ಷದ ಸುಮಾರು 280 ಬಿ.ಎಸ್.ಸಿ ಮತ್ತು ಬಿಬಿಎಂನ 80 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಸದರಿ ಪರೀಕ್ಷೆಗಳ ಫಲಿತಾಂಶ ಜು.16ರಂದು ಬೆಂಗಳೂರು ವಿವಿಯ ಎಲ್ಲ ಕಾಲೇಜುಗಳಲ್ಲಿ ಪ್ರಕಟವಾಗಿದ್ದರೂ ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಫಲಿತಾಂಶದಲ್ಲಿ ಗೈರು ಹಾಜರು ಎಂದು ಪ್ರಕಟಿಸಿರುವುದರಿಂದ ವಿದ್ಯಾರ್ಥಿನಿಯರು ಕಂಗಾಲು ಆಗಿದ್ದಾರೆ.
ಪ್ರತಿವರ್ಷ ಪದವಿ ಪರೀಕ್ಷೆಗಳ ಫಲಿತಾಂಶದಲ್ಲಿ ಏರುಪೇರು ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿಯರು ಗುರುವಾರ ಕಾಲೇಜಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರಿಗೆ ಮನವಿ ಸಲ್ಲಿಸಿ, ಬೆಂಗಳೂರು ವಿವಿಯ ಕುಲಪತಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಕಳುಹಿಸುವಂತೆ ಒತ್ತಾಯಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಪರೀಕ್ಷೆಗೆ ಹಾಜರಾಗಿದ್ದರೂ ಫಲಿತಾಂಶದಲ್ಲಿ ಗೈರು ಹಾಜರಿ ಎಂದು ಪ್ರಕಟಿಸಿರುವ ವಿವಿಯ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಿಡಿಕಾರಿದ ವಿದ್ಯಾರ್ಥಿನಿಯರು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅಂತಿಮ ಬಿ.ಎಸ್.ಸಿ ಮತ್ತು ಬಿಬಿಎಂ ಪರೀಕ್ಷಾ ಫಲಿತಾಂಶ ವಿಳಂಬದಿಂದ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಕಷ್ಟವಾಗುತ್ತದೆ, ಜತೆಗೆ ಪರೀಕ್ಷೆಗೆ ಹಾಜರಾಗಿದ್ದರೂ ಗೈರು ಎಂದು ಪ್ರಕಟಿಸಿರುವುದರಿಂದ ವಿದ್ಯಾರ್ಥಿನಿಯರು ಮಾನಸಿಕ ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಯುವಜನ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ. ಸುರೇಶ್ಗೌಡ ತಿಳಿಸಿದರಲ್ಲದೆ, ಕೂಡಲೇ ಫಲಿತಾಂಶ ಪ್ರಕಟಿಸಬೇಕೆಂದು ಆಗ್ರಹಿಸಿದರು.
24 ಗಂಟೆಯೊಳಗೆ ಫಲಿತಾಂಶ ಪ್ರಕಟಿಸದಿದ್ದರೆ ಶುಕ್ರವಾರದಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ಮುಖಂಡರಾದ ವಿದ್ಯಾಶ್ರೀ, ಪ್ರತಿಭಾ, ಶ್ವೇತ,ಸುಧಾ, ಶರಣ್ಯ, ಶಾಜಿಯಾ, ವರಲಕ್ಷ್ಮೀ, ಸುಶ್ಮಿತ, ಸ್ವಾತಿ, ರೇಣುಕಾ, ವಿಶಾಲಕ್ಷೀ, ಪಲ್ಲವಿ, ಗೌತಮಿ, ನಾಗೇಶ್, ಲೋಕೇಶ್ ಅವರು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement