ರೈತರ ಮೇಲೆ ಹಲ್ಲೆ ಪ್ರಕರಣ: ತಾಲೂಕು ಆಡಳಿತ ನಿರ್ಲಕ್ಷ್ಯ
ಚಿಂತಾಮಣಿ: ರೈತರ ಮೇಲೆ ಹಲ್ಲೆ ಪ್ರಕರಣ ಮತ್ತು ರೈತರು ಬೆಳೆದ ಬೆಳೆಗೆ ಬಿಳಿ ಚೀಟಿ ನೀಡಿ ಮೋಸ ಮಾಡುತ್ತಿರುವ ದಲ್ಲಾಳಿಗಳ ವಿರುದ್ಧ ಎಪಿಎಂಸಿ ಅಧಿಕಾರಿಗಳು ಮತ್ತು ಆಡಳಿತ ನಿರ್ಲಕ್ಷ ವಹಿಸಿವೆ ಎಂದು ರೈತಪರ ಸಂಘಟನೆಗಳು ಮಂಗಳವಾರ ನಡೆದ ರೈತ ಮತ್ತು ವರ್ತಕರ ಸಭೆಯಲ್ಲಿ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಕರೆದಿದ್ದ ರೈತ ಮತ್ತು ವರ್ತಕರ ಸಂಧಾನ ಸಭೆಯಲ್ಲಿ ರೈತ ಸಂಘ, ಹಸಿರುಸೇನೆ ಮತ್ತು ಕರ್ನಾಟಕ ಪ್ರಾಂತ ಸಂಘ ಎಪಿಎಂಸಿ ದಲ್ಲಾಳಿಗಳ ಕಾರ್ಯವೈಖರಿ ವಿರುದ್ಧ ಪರಸ್ಪರ ಮಾತಿನ ಚಕಮುಖಿ ನಡೆಸಿದರು.
ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಸಂಚಾಲಕ ಸಿ.ಗೋಪಿನಾಥ್ ಮಾತನಾಡಿ, ದಲ್ಲಾಳಿಗಳು ಬಿಳಿ ಚೀಟಿ ನೀಡಿ ರೈತರಿಂದ 100ಕ್ಕೆ 10ರಂತೆ ಜಾಕ್ಪಾಟ್ ತೆಗೆದುಕೊಳ್ಳುತ್ತಿರುವ ವಿಷಯ ಎಪಿಎಂಸಿ ಅಧಿಕಾರಿಗಳಿಗೂ ಮತ್ತು ಆಡಳಿತಕ್ಕೆ ಗೊತ್ತಿದ್ದರೂ ಸಹ ನಿದ್ರಾವಸ್ತೆಯಲ್ಲಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಕಾನೂನು ಅಡಿಯಲ್ಲಿ ರೈತರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸುತ್ತೇನೆಂದು ಆಶ್ವಾಸನೆ ನೀಡಿದರು.
ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ಲಾಠಿಯಿಂದ ಹಲ್ಲೆ ಮಾಡಿದ ಘಟನೆಯನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಬರ್ತುಲ, ತಹಸೀಲ್ದಾರ ಮಧ್ಯ ಪ್ರವೇಶಿಸಿ, ಕಾನೂನು ಉಲ್ಲಂಘಿಸಿ ಯಾವ ದಲ್ಲಾಳಿಯೂ ರೈತರಿಗೆ ಬಿಳಿ ಚೀಟಿ ನೀಡಬಾರದು. ಜಾಕ್ಪಾಟ್ ಹೆಸರಿನಲ್ಲಿ ಶೇ.10ರಂತೆ ಕಮೀಷನ್ ಪಡೆಯುವುದು ತಪ್ಪು. ಮುಂದಿನ ದಿನಗಳಲ್ಲಿ ಸಭೆ ಕರೆದು ರೈತ ಹಾಗೂ ವರ್ತಕರ ನಡುವೆ ಉತ್ತಮ ಬಾಂಧವ್ಯವನ್ನು ಸರಿಪಡಿಸುವಲ್ಲಿ ಮುಂದಾಗಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಎಪಿಎಂಸಿ ಸದಸ್ಯರಾದ ಗೋಪಾಲಕೃಷ್ಣ, ಚಲನ್ನ, ಗೋಪಾಲರೆಡ್ಡಿ, ಮುನಿರೆಡ್ಡಿ, ಎಚ್.ನಾರಾಯಣಸ್ವಾಮಿ, ಕೈವಾರ ಸುಬ್ಬಾರೆಡ್ಡಿ, ಆಂಜಪ್ಪ, ರೈತರಾದ ಗಂಗುಲಪ್ಪ, ನಾರಾಯಣಸ್ವಾಮಿ, ವೆಂಕಟರವಣಪ್ಪ, ನರಸಪ್ಪ, ವೆಂಕಟಸುಬ್ಬಾರೆಡ್ಡಿ, ಟಿ.ನಾಗರಾಜ್, ಅನಂತರೆಡ್ಡಿ ಇತರರು ಇದ್ದರು.