ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಚಾರಿ ನಿಯಮ: ವಿದ್ಯಾರ್ಥಿಗಳಿಗೆ ಜಾಗೃತಿ ರ್ಯಾಲಿ

Rashmi Kasaragodu
Updated On : 19 Jul 2013, 12:36 pm

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಸಾರಿಗೆ ಸಂಚಾರಿ ನಿಯಮಗಳ ಪಾಲನೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರಿ ಪೊಲೀಸ್ ಠಾಣೆ ವತಿಯಿಂದ ನಗರದಲ್ಲಿ ಗುರುವಾರ ಜಾಗೃತಿ ರ್ಯಾಲಿ ನಡೆಯಿತು. ಈ ಮೂಲಕ ನಗರದ ಬಿ.ಬಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಘೋಷಣೆಗಳೊಂದಿಗೆ ಸಾಗಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒತ್ತಿ ಹೇಳಲಾಯಿತು.
ನಗರದ ನಂದಿ ರಂಗಮಂದಿರದಿಂದ ಪ್ರಾರಂಭವಾದ ರ್ಯಾಲಿಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು,ಪೊಲೀಸರು, ಶಿಕ್ಷಕರು, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಸೇರಿದಂತೆ ಹಲವರು ಸಾಥ್ ನೀಡಿದರು.
ನಂತರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲೆಗೆ ಸುರಕ್ಷಿತ ಮಾರ್ಗ ಅರಿವು ಹಾಗೂ ಸ್ಟುಡೆಂಟ್ ಅಸೋಸಿಯೆಷನ್ ರೋಡ್ ಸೇಪ್ಟಿ ಸಮಾವೇಶ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ಮಹೇಶ್ಕುಮಾರ್, ಕಾನೂನು ಪ್ರಕಾರ 18 ವರ್ಷದೊಳಗಿನವರಿಗೆ ವಾಹನ ಚಾಲನಾ ಪರವಾನಗಿಯನ್ನು ನೀಡಲಾಗುವುದಿಲ್ಲ.
ಆದರೂ ಹಲವರು ಪರವಾನಗಿಯನ್ನು ಹೊಂದಿರದಿದ್ದರೂ ವಾಹನ ಚಾಲನೆ ಮಾಡುವಂತಹುದು ಹೆಚ್ಚಿಗೆ ನಡೆಯುತ್ತಿದೆ. ಅಲ್ಲದೇ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ಗಳಲ್ಲಿ ಮಾತನಾಡಿಕೊಂಡು ಹೋಗುವುದನ್ನು ಸಹ ಕಾಣಬಹುದು. ಆದರೆ, ಇದು ಅಪಾಯ. ಜತೆಗೆ ನಿಯಮ ಬಾಹಿರ ಎಂದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕೆಂದು ಸಲಹೆ ನೀಡಿದರು.
ಚಾಲಕರಿಗೆ ಎಚ್ಚರಿಕೆ: ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ವಾಹನದಲ್ಲಿ ಕರೆದುಕೊಂಡು ಹೋಗುವಂತಹ ವ್ಯವಸ್ಥೆಯನ್ನು ಅನೇಕ ಶಾಲೆಗಳು ಸಹಜವಾಗಿ ಮಾಡಿಕೊಂಡಿದ್ದು ಶಾಲಾ ವಾಹನವನ್ನು ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕು. ನಿರ್ಲಕ್ಷ್ಯದಿಂದ ಅಡ್ಡಾದಿಡ್ಡಿ ವಾಹನವನ್ನು ಚಲಾಯಿಸುವುದು, ಮಕ್ಕಳನ್ನು ವಾಹನದಲ್ಲಿ ಕುರಿಗಳು ತುಂಬಿದಂತೆ ತುಂಬಿರುವುದು ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ವೋಚ್ಛ ನ್ಯಾಯಾಲಯವು ಶಾಲಾ ಮಕ್ಕಳ ಸುರಕ್ಷಿತ ಅಡಿಯಲ್ಲಿ ಮಾರ್ಗಸೂಚಿಯನ್ನು ತಿಳಿಸಿದೆ. ಇದರಂತೆ ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ತೊಂದರೆಯಾಗುವಂತೆ ಮಕ್ಕಳನ್ನು ವಾಹನದಲ್ಲಿ ತುಂಬಿಸುವಂತಹುದನ್ನು ಮಾಡಬಾರದು. ಮಕ್ಕಳ ಹಿತಾಸಕ್ತಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.  ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೋಬೇಷನರಿ ಡಿವೈಎಸ್ಪಿ ಲಾವಣ್ಯ, ಪಿಎಸ್ಐ ರವೀಂದ್ರ, ನಗರಠಾಣೆಯ ಎಸ್.ಐ. ವಸಂತ್ ಕುಮಾರ್, ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಶಾಲೆಯ ಮುಖ್ಯೊಪಾಧ್ಯಾಯ ಎಂ. ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement