ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಕರೆ
ಕೋಲಾರ: ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ವತಿಯಿಂದ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ಕಟ್ಟಲು ಸಾಲ ಹೀಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು ಅರ್ಹರು ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜಗೋಪಾಲ್ ಕರೆ ನೀಡಿದರು.
ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುತಿನ ಚೀಟಿ ಮತ್ತು ಹಲವು ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಿರ್ಮಾಣ ಕ್ಷೇತ್ರದಲ್ಲಿ ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿಸಿದ ಫಲಾನುಭವಿಗಳಿಗೆ ಹುಟ್ಟಿನಿಂದ ಸಾವಿನ ತನಕ ಹಲವು ರೀತಿಯಲ್ಲಿ ಸೌಲಭ್ಯಗಳು ದೊರೆಯುತ್ತದೆ.
ಇದೊಂದು ಉತ್ತಮ ಯೋಜನೆಯಾಗಿದ್ದು, ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಿ ಸವಲತ್ತು ಪಡೆಯಬೇಕೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಸಿಐಟಿಯು ಸಂಘಟನೆಯ ಸುದೀರ್ಘ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಲ್ಯಾಣ ಮಂಡಳಿಯನ್ನು ರಚಿಸಲಾಗಿದ್ದು, ಕಾರ್ಮಿಕರಿಗೆ ಇಂದು ಕನಿಷ್ಠ ಮಟ್ಟದಲ್ಲಿ ಸೌಲಭ್ಯಗಳು ದೊರೆಯುತ್ತಿದೆ.
ಕಲ್ಯಾಣ ಮಂಡಳಿಯಲ್ಲಿ 3800 ಕೋಟಿಗೂ ಹೆಚ್ಚಿನ ಹಣ ಸಂಗ್ರಹಗೊಂಡಿದ್ದು, ಈ ಹಣದಿಂದ ಬರುವ ಬ್ಯಾಂಕ್ ಬಡ್ಡಿ ಹಣಕ್ಕಿಂತ ಕಡಿಮೆ ಮೊತ್ತವನ್ನು ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ಮೂಲಕ ವಿತರಿಸಲಾಗುತ್ತಿದೆ. ಈಗ ನೀಡುತ್ತಿರುವ ಸೌಲಭ್ಯದ ಮೊತ್ತವನ್ನು ಎರಡು ಪಟ್ಟು ಹೆಚ್ಚು ಮಾಡಬೇಕು ಒತ್ತಾಯಿಸಿದರಲ್ಲದೇ ಈ ನಿಟ್ಟಿನಲ್ಲಿ ಸಮರ ಶೀಲ ಹೋರಾಟಗಳನ್ನು ನಡೆಸಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಮಿಕ ನಿರೀಕ್ಷಕ ವಿಜಯಕುಮಾರ್, ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಆನಂದ್, ಕೊಡಿಯಪ್ಪ, ಗಡ್ಡಂ ಮುನಿರಾಜು, ತಾಲೂಕು ಕಾರ್ಯದರ್ಶಿ ಭೀಮರಾಜ್, ರೈತ ಸಂಘದ ಜಿಲ್ಲಾ ಮುಖಂಡ ರಾಮಚಂದ್ರ ಮತ್ತಿತರರು ಇದ್ದರು. ಜಿಲ್ಲಾ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.
ಇಂದ್ರಮ್ಮ ಮತ್ತು ಶೋಭರಾಣಿ ಸೇರಿದಂತೆ 10 ಮಂದಿಗೆ ವಿವಿಧ ಸೌಲಭ್ಯಗಳ ಚೆಕ್ಗಳನ್ನು ವಿತರಿಸಲಾಯಿತು.