ಎಲ್ಲೆಂದರಲ್ಲಿ ಕೊಳೆತು ನಾರುವ ರಾಶಿ ರಾಶಿ ಕಸ
ಆರ್.ರಜನೀಕಾಂತ್
ಕೆಜಿಎಫ್: ಪಟ್ಟಣದಾದ್ಯಂತ ರಾಶಿ ರಾಶಿಯಾಗಿ ಬಿದ್ದಿರುವ ಕಸ ವಿಲೇವಾರಿಯಾಗದೆ ಕೊಳೆತು ನಾರುತ್ತಿದ್ದರೂ ಇಲ್ಲಿನ ನಗರಸಭೆ ಆಯುಕ್ತರು ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ.
ಮಾತ್ರವಲ್ಲ, ಕಂತೆಗೆ ತಕ್ಕ ಬೊಂತೆ ಎಂಬಂತೆ ಅಧಿಕಾರಿಗಳೂ ವರ್ತಿಸುತ್ತಿದ್ದಾರೆ.
ಕೆಜಿಎಫ್ನ ಪ್ರಮುಖ ರಸ್ತೆಗಳಲ್ಲಿ, ಬಸ್ ನಿಲ್ದಾಣದ ಸುತ್ತಮುತ್ತಲು, ಹೋಟೆಲ್, ಮಾರುಕಟ್ಟೆ, ಶಾಲಾ ಕಾಲೇಜು, ಬ್ಯಾಂಕ್ಗಳು ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ರಾಶಿ ರಾಶಿ ಕಸ ತುಂಬಿ ತುಳುಕಿ, ಕೊಳೆತು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ತೊಂದರೆ: ಸರಿಯಾದ ಸಮಯಕ್ಕೆ ಕಸ ವಿಲೇವಾರಿಯಾಗದ ಕಾರಣ ಇದರಿಂದ ಬೀರುವ ಕೆಟ್ಟ ವಾಸನೆಯಿಂದ ಪರಿಸರ ಹಾಳಾಗಿ ಇದರ ಪಕ್ಕದಲ್ಲಿ ನಡೆದುಕೊಂಡು ಹೋಗುವ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಯುವಕರಿಗೆ, ವೃದ್ಧರಿಗೆ ಮತ್ತು ವಾಹನ ಚಾಲಕರಿಗೆ ಅಸಹ್ಯ ಉಂಟಾಗುತ್ತಿದ್ದು ಇದರಿಂದ ಕಾಲರ, ಟೈಫಾಯಿಡ್, ಡೆಂಘೀ ಸೇರಿದಂತೆ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಭೀತಿಗೊಂಡಿದ್ದಾರೆ.
ಮುಖ್ಯ ಸ್ಥಳದಲ್ಲೇ ಮೂಗು ಮುಚ್ಚುವ ಸ್ಥಿತಿ: ಕೆಜಿಎಫ್ ನಗರಸಭಾ ವ್ಯಾಪ್ತಿಯ ಬಸ್ನಿಲ್ದಾಣ ಮತ್ತು ಎಂ.ಜಿ.ಮಾರುಕಟ್ಟೆ ಹತ್ತಿರದ ಉರಿಗಾಂಪೇಟೆಗೆ ಹೋಗುವ ಮುಖ್ಯ ರಸ್ತೆಯಲ್ಲೇ ಕಸದ ರಾಶಿ ತುಂಬಿಕೊಂಡು ರಸ್ತೆಯೇ ಕಾಣದಂತಾಗಿದೆ.ಕೊಳೆತು ನಾರುತ್ತಿರುವ ಈ ಕಸದ ರಾಶಿಯ ಮೇಲೆಯೇ ಉರಿಗಾಂಪೇಟೆ, ಅಶೋಕ್ನಗರ, ಸೋಮೇಶ್ವರಬ್ಲಾಕ್, ಸ್ವಾಮಿನಾಥಪುರಂ, ಪಿಚ್ಚಹಳ್ಳಿ, ಪೆದ್ದಪಲ್ಲಿ ಮುಂತಾದ ಬಡಾವಣೆಯ ನಿವಾಸಿಗಳು ಈ ರಸ್ತೆಯಲ್ಲೆ ಹೋಗಬೇಕಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಮಾರುಕಟ್ಟೆಗೆ ಹೋಗುವ ಮಹಿಳೆಯರು, ಯುವಕರು, ವ್ಯಾಪಾರಸ್ಥರು, ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಆಟೋಗಳಲ್ಲಿ, ಬಸ್ಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ, ಸೈಕಲ್ಗಳಲ್ಲಿ ಹತ್ತು ಹಲವು ಬಾರಿ ಹೋಗಿ ಬರಬೇಕಾಗಿದೆ. ಅಲ್ಲದೆ ಈ ಕಸದ ರಾಶಿಯ ಪಕ್ಕದಲ್ಲೇ ಸಾಯಿಬಾಬ ದೇವಸ್ಥಾನ, ಹೋಟೆಲ್, ಸರ್ಕಾರಿ ಶಾಲೆ, ಸಾರ್ವಜನಿಕ ಆರೋಗ್ಯ ಕೇಂದ್ರವೂ ಇಲ್ಲಿಯೇ ಇದೆ.
ಅಧಿಕಾರಿಗಳಿಗೆ ಹಿಡಿ ಶಾಪ: ರಾಜ್ಯ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರೂ ಜಿಲ್ಲಾಧಿಕಾರಿಯಾಗಲೀ ಸ್ಥಳಿಯ ನಗರಸಭೆ ಆಯುಕ್ತರಾಗಲೀ ಕ್ಷೇತ್ರದ ಪ್ರತಿನಿಧಿಗಳಾಗಲೀ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ಅದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ. ತಿಂಗಳುಗಟ್ಟಲೇ ಕಸ ವಿಲೇವಾರಿಯಾಗದೆ ರಾಶಿಯಾಗಿ ಬಿದ್ದಿರುವ ಈ ಸ್ಥಳದಲ್ಲಿ ಜಾನುವಾರುಗಳು, ಹಂದಿಗಳು, ಬೀದಿ ನಾಯಿಗಳು, ನೊಣಗಳು, ಸೊಳ್ಳೆಗಳು ಮುತ್ತಿಕೊಳ್ಳುವುದರಿಂದ ಕೆಟ್ಟ ವಾತಾವರಣ ಉಂಟಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು ಎಂಬುದಕ್ಕೆ ಉದಾಹರಣೆ ಇಲ್ಲಿದೆ. ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಇದೇ ಉರಿಗಾಂಪೇಟೆಯ ನಿವಾಸಿ 10 ವರ್ಷದ ಬಾಲಕಿ ಸಾಂಕ್ರಾಮಿಕ ಖಾಯಿಲೆಗೆ ಬಲಿಯಾಗಿದ್ದು, ಈ ನಿಟ್ಟಿನಲ್ಲಿ ನಗರಸಭೆ ಆಯುಕ್ತರಿಗೆ, ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.