ಐಟಿ ದಾಳಿ ಖಂಡಿಸಿ ಪ್ರತಿಭಟನೆ
ಚಿಂತಾಮಣಿ: ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿ ಖಂಡಿಸಿ ಶುಕ್ರವಾರ ಒಕ್ಕಲಿಗರ ಹಿತ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಖಂಡಿಸಿ ಶುಕ್ರವಾರ ತಾಲೂಕು ಒಕ್ಕಲಿಗರ ಹಿತ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮಠದ ಶಿಕ್ಷಣ ಸಂಸ್ಥೆಗಳ ಪರಂಪರೆಗೆ ವಿರುದ್ಧವಾಗಿ ಹಾಗೂ ಮಠಕ್ಕೆ ನಡೆದುಕೊಳ್ಳುವ ಭಕ್ತರ ಮನಸ್ಸಿಗೆ ನೋವುಂಟು ಮಾಡುವ ರೀತಿಯಲ್ಲಿ ಮಾಡಿರುವ ರೀತಿಯಲ್ಲಿ ದಾಳಿ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಐಟಿ ದಾಳಿಯ ಹಿಂದೆ ರಾಜಕೀಯ ಪಿತೂರಿ, ದುರುದ್ದೇಶ ಕೂಡಿದೆ. ಈ ನಿಟ್ಟಿನಲ್ಲಿ ದಾಳಿಯ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕಾಗುತ್ತದೆ. ಹಾಗಾಗಿ, ಇದರ ಹೊಣೆ ಹೊತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹೊರಬಂದು ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಂತರ ತಾಲೂಕು ದಂಡಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಚಿಂತಾಮಣಿ ಒಕ್ಕಲಿಗರ ವೇದಿಕೆ ಮುಖಂಡರಾದ ಗುತ್ತಿಗೆದಾರ ಶ್ರೀರಾಮರೆಡ್ಡಿ,ಕೈವಾರ ಸುಬ್ಬಾರೆಡ್ಡಿ,ನಾಗದೇನಹಳ್ಳಿ ನಾರಾಯಣಸ್ವಾಮಿ,ಪದ್ಮಾವತಿ ಸ್ಟುಡಿಯೋ ರವಿ,ನಾಗೇಶ್, ಬನಹಳ್ಳಿ ರವಿ, ರಾಮಚಂದ್ರರೆಡ್ಡಿ, ಕೈವಾರ ಗೋವಿಂದಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.