ಒಕ್ಕಲಿಗ ಸಮಾಜ ಸದೃಢವಾಗಿದೆ: ಸ್ವಾಮೀಜಿ
ಕುಣಿಗಲ್: ಒಕ್ಕಲಿಗ ಸಮಾಜ ಸದೃಢವಾಗಿದೆ. ಆದಾಯ ತೆರಿಗೆ ದಾಳಿ ನಡೆಸುವುದರಿಂದ, ಶಕ್ತಿಸೌಧದಲ್ಲಿ ಭಾವಚಿತ್ರಗಳನ್ನು ತೆಗೆಸುವುದರಿಂದ ಸಮಾಜ ಅಭದ್ರಗೊಳಿಸಲಾಗದು ಎಂದು ಕಿತ್ತನಾಗಮಂಗಲ ಅರೇಶಂಕರ ಮಠದ ಸಿದ್ದರಾಮಚೈತನ್ಯ ಸ್ವಾಮೀಜಿ ತಿಳಿಸಿದರು.
ಶುಕ್ರವಾರ, ತಾಲೂಕಿನ ನಿಡಸಾಲೆ ಗ್ರಾಮದಲ್ಲಿ ಗ್ರಾಮಸ್ಥರು ಆದಿಚುಂಚನಗಿರಿ ಶಾಖಾಮಠದ ಕಚೇರಿ, ವಿದ್ಯಾಸಂಸ್ಥೆಗಳ ಕಾರ್ಯಾಲಯಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಿರುವುದರನ್ನು ಖಂಡಿಸಿ, ರಸ್ತೆತಡೆ ಪ್ರತಿಭಟನೆ ನಡೆಸುತ್ತಿದ್ದ, ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಸಮಾಜದ ಎಲ್ಲಾ ವರ್ಗದ ಧಾರ್ಮಿಕ, ಶೈಕ್ಷಣಿಕ ಪ್ರಗತಿಗೆ ಹಗಲಿರುಳು ಶ್ರಮಿಸುತ್ತಿರುವ ಅದಿಚುಂಚನಗಿರಿ ಮಠದ ಮೇಲಿನ ಅದಾಯ ತೆರಿಗೆ ದಾಳಿಯನ್ನು ಎಲ್ಲರೂ ಖಂಡಿಸಬೇಕು. ಸಂಘ, ಸಂಸ್ಥೆಗಳಲ್ಲಿ ಅವ್ಯವಹಾರ ನಡೆದಿದ್ದರೆ ಕಾನೂನುಬದ್ಧವಾಗಿ ಸೂಚನೆ ನೀಡಿ ಪರಿಶೀಲನೆ ನಡೆಸಬಹುದು.
ಆದರೆ ಏಕಾಏಕಿ ದಾಳಿ ನಡೆಸುವುದರ ಜೊತೆಗೆ ಮಾಧ್ಯಮಗಳ ಮೂಲಕ ತೀವ್ರ ಪ್ರಚಾರ ನಡೆಸಿದ್ದು ತಪ್ಪು, ಆದಾಯ ತೆರಿಗೆ ಇಲಾಖೆಯ ತಪ್ಪು ನಿರ್ಧಾರದಿಂದ ಕೈಗೊಂಡ ಈ ಕ್ರಮ ಇಡೀ ಒಕ್ಕಲಿಗ ಸಮುದಾಯಕ್ಕೆ ಅಗೌರವ ತರುವಂತೆ ನಡೆದುಕೊಂಡಿದೆ ಎಂದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮುದ್ದಣ್ಣಸ್ವಾಮಿ, ಶಿವರಾಜು, ಪ್ರಕಾಶ್, ಪ್ರಸಾದ್ ಸುರೇಶ್, ಇತರರು ಉಪಸ್ಥಿತರಿದ್ದು ಅರ್ಧಗಂಟೆ ಕಾಲ ರಾಜ್ಯ ಹೆದ್ದಾರಿ 33ರಲ್ಲಿ ರಸ್ತೆತಡೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.