ಗೊಂದಲಕಾರಿ ಕ್ರಮದಿಂದ ಶಾಂತ ವಾತಾವರಣಕ್ಕೆ ಧಕ್ಕೆ ಸಂಭವ
ಕ.ಪ್ರ.ವಾರ್ತೆ ಕುಣಿಗಲ್ ಜು. 19
ತಾಲೂಕು ಆಡಳಿತ ಗೊಂದಲಕಾರಿ ಕ್ರಮದಿಂದ ಗ್ರಾಮದಲ್ಲಿನ ಶಾಂತ ವಾತಾವರಣಕ್ಕೆ ಧಕ್ಕೆಯಾಗುವ ಸಾಧ್ಯತೆ ಇದ್ದು ಜಿಲ್ಲಾಡಳಿತ ಕೂಡಲೆ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಡುವಗೆರೆ ಗ್ರಾಮಸ್ಥರು ಆಗ್ರಹಿಸಿರುವ ಘಟನೆ ವರದಿಯಾಗಿದೆ.
ಪಡುವಗೆರೆ ಗ್ರಾಮದ ಗ್ರಾಮದೇವತೆ ಕೊಲ್ಲಾಪುರದಮ್ಮ ದೇವರ ಜಾತ್ರೆ ವಿಷಯವಾಗಿ ಕಳೆದ ಹಲವು ದಶಕಗಳಿಂದ ಗ್ರಾಮದಲ್ಲಿ ಎರಡು ಬಣಗಳಾಗಿ, ಮೂಲ ದೇವಾಲಯ ಹಾಗೂ ನೂತನ ದೇವಾಲಯ ಸಮಿತಿ ಎಂಬ ಎರಡು ಗುಂಪುಗಳಿದ್ದು, ಗ್ರಾಮದೇವತೆ ಹಬ್ಬಕ್ಕೆ ಸಿದ್ಧತೆಗಳು ನಡೆದರೆ ಸಾಕು, ಹೊಡೆದಾಟ, ಬಡಿದಾಟಗಳಾಗಿ ಬಹುತೇಕರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಆದರೂ ಗ್ರಾಮದ ಎರಡೂ ಬಣಗಳು ಸಹ ಒಣಪ್ರತಿಷ್ಠೆಗೆ ಒಳಗಾಗಿ, ಗ್ರಾಮದಲ್ಲಿ ಗೊಂದಲ ಮಯ ವಾತವರಣಕ್ಕೆ ಕಾರಣರಾಗಿದ್ದಾರೆ.
23, 24-04-2013ರಂದು ನೂತನ ಗ್ರಾಮದೇವತೆ ದೇವಾಲಯ ಸಮಿತಿಯವರು ಮತ್ತು ದಿನಾಂಕ 30, 01-05-2013ರಂದು ಮೂಲಗ್ರಾಮದೇವತೆ ದೇವಾಲಯ ಸಮಿತಿಯವರು ಗ್ರಾಮದೇವತೆ ಹಬ್ಬಾಚರಣೆ ಮಾಡಲು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ ಮೇರೆಗೆ, ತಹಸೀಲ್ದಾರ್, ಆರಕ್ಷಕ ವೃತ್ತ ನಿರೀಕ್ಷಕರು ಪೂರ್ವಭಾವಿ ಶಾಂತಿ ಸಭೆ ನಡೆಸಿದ್ದು, ಸಭೆಯಲ್ಲಿ ಒಮ್ಮತ ಮೂಡದ ಕಾರಣ ಮತ್ತು ವಿವಿಧ ಚುನಾವಣೆಗಳು ಘೋಷಣೆಯಾದ ಹಿನ್ನೆಲೆಯಲ್ಲಿ ಹಬ್ಬಾಚರಣೆಗೆ ಯಾವುದೇ ಬಣಗಳಿಗೆ ಅನುಮತಿ ನೀಡದೆ ಮುಂದೂಡಿದ್ದರು.
ಚುನಾವಣೆಗಳೆಲ್ಲಾ ಪೂರ್ಣಗೊಂಡ ಬಳಿಕ ಇದೆ 16, 17ರಂದು ಮೂಲ ದೇವಾಲಯ ಸಮಿತಿಯವರು ಗ್ರಾಮದೇವತೆ ಹಬ್ಬಾಚರಣೆಗೆ ಅನುಮತಿ ಕೋರಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು, ತಹಸೀಲ್ದಾರ್ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದೆ, ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದು, ಈಗ ನೂತನ ದೇವಾಲಯ ಸಮಿತಿಯವರು ಇದೇ 20ರಂದು ಗ್ರಾಮದಲ್ಲಿ ಪೌರಾಣಿಕ ನಾಟಕ ನೆಪದಲ್ಲಿ ಉತ್ಸವ, ನಡೆಸಲು ಮುಂದಾಗಿ ಕಾರ್ಯಕ್ರಮದಲ್ಲಿ ಶಾಸಕ ಡಿ.ನಾಗರಾಜಯ್ಯ ಹಾಗೂ ಜಿಪಂ ಸದಸ್ಯ ಡಾ.ಬಿ.ಎನ್.ರವಿ ಸೇರಿದಂತೆ ಇತರೆ ಪ್ರಮುಖರು ಪಾಲ್ಗೊಳ್ಳುವ ಕರಪತ್ರಗಳನ್ನು ಮುದ್ರಿಸಿ ವಿತರಣೆ ಮಾಡುತ್ತಾ, ಗ್ರಾಮದಲ್ಲಿ ಮತ್ತಷ್ಟು ಗೊಂದಲಕಾರಿ ವಾತಾವರಣಕ್ಕೆ ನಿರ್ಮಾಣ ಮಾಡಿದ್ದಾರೆಂದು, ಸದರಿ ನಾಟಕದಲ್ಲಿ ಪಾಲ್ಗೊಂಡಿರುವ ಬಹುತೇಕ ಪಾತ್ರಧಾರಿಗಳ ಮೇಲೆ ಈಗಾಗಲೆ ಹಲವು ಪ್ರಕರಣಗಳು ಸಹ ದಾಖಲಾಗಿವೆ.
ಹಲವು ಸಮಸ್ಯೆಗೆ ಕಾರಣ: ಮೊದಲೆ ಗೊಂದಲ ಹಾಗೂ ಸೂಕ್ಷ್ಮ ಪರಿಸರವಿರುವ ಗ್ರಾಮದಲ್ಲಿ, ತಾಲೂಕು ಆಡಳಿತ ಯಾವುದೇ ಬಣಕ್ಕೂ ಜಾತ್ರೆ, ಹಬ್ಬ ಹಾಗೂ ನಾಟಕ ಆಡಲು ಅನುಮತಿ ನೀಡಿಲ್ಲವಾದರೂ, ನೂತನ ದೇವಾಲಯ ಸಮಿತಿಯವರು ನಾಟಕವಾಡುವ ನೆಪದಲ್ಲಿ ಹಲವು ಸಮಸ್ಯೆಗೆ ಕಾರಣರಾಗಿ, ಗ್ರಾಮದಲ್ಲಿ ಅಶಾಂತ ವಾತಾವರಣ ನಿರ್ಮಾಣಕ್ಕೆ ಕಾರಣವಾಗುವ ಎಲ್ಲಾ ಸಂಭವವಿದೆ.
ಈಗಾಗಲೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರೂ, ಸದರಿಯವರು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಕಾರಣ ಜಿಲ್ಲಾಧಿಕಾರಿಗಳು ಕೂಡಲೆ ಮದ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮೂಲ ದೇವಾಲಯ ಸಮಿತಿಯ ಗೋವಿಂದರಾಜು, ಹುಚ್ಚೇಗೌಡ, ಕುಮಾರಚಾರಿ ಇತರರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.