ನಾಳೆ ಸುಬ್ಬಾರೆಡ್ಡಿಗೆ ಪೌರ ಸನ್ಮಾನ
ಬಾಗೇಪಲ್ಲಿ: ತಾಲೂಕು ಕರವೇ ಘಟಕ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಮಾನಿಗಳ ಬಳಗದ ಜಂಟಿ ಆಶ್ರಯದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಪೌರ ಸನ್ಮಾನ ಕಾರ್ಯಕ್ರಮವನ್ನು ಭಾನುವಾರ ಸಂಜೆ 6 ಗಂಟೆಗೆ ಪಟ್ಟಣದ ಎಸ್.ಬಿ.ಎಂ ವೃತ್ತದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ವೃತ್ತಿ ರಂಗಭೂಮಿ ಅಶಕ್ತ ಕಲಾವಿದರ ಸಹಾಯಾರ್ಥ ನಟರಾಜ ನಾಟಕ ಕಲಾ ಸಂಘದ ವತಿಯಿಂದ ವಿವಿಧ ಕಲಾವಿದರಿಂದ ನೃತ್ಯ, ಹಾಸ್ಯ, ಮಿಮಿಕ್ರಿ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೀನುಮರಿ ಪಾಲನೆಗೆ ಸಹಾಯಧನ
ತುಮಕೂರು: 2013-14 ನೇ ಸಾಲಿಗೆ ಮೀನು ಪಾಶುವಾರು ಹಕ್ಕನ್ನು ಪಡೆದಿರುವ ಮೀನು ಕೃಷಿಕರು ಸಂಬಂಧಿಸಿದ ಕೆರೆ ಅಂಗಳದ ಅಂಚಿನಲ್ಲಿ ಅರ್ಧ ಎಕರೆಯಿಂದ ಎರಡೂವರೆ ಎಕರೆ ಜಾಗದಲ್ಲಿ ಮೀನು ಮರಿಪಾಲನಾ ಕೊಳಗಳನ್ನು ನಿರ್ಮಿಸಿಕೊಳ್ಳಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೀನುಮರಿ ಪಾಲನಾ ಕೊಳ ನಿರ್ಮಿಸಿಕೊಂಡು, ಮೀನುಮರಿ ಪಾಲನೆ ಮತ್ತು ಮೀನು ಕೃಷಿ ಕೈಗೊಂಡು ಉತ್ತಮ ಗಾತ್ರದ ಆರೋಗ್ಯವಂತ ಮೀನುಮರಿಗಳನ್ನು ರೈತರೇ ಸ್ವತಃ ಬೆಳೆಸಿಕೊಂಡು ಕೆರೆಗಳಿಗೆ ಬಿತ್ತನೆ ಮರಿಗಳನ್ನು ಒದಗಿಸಿಕೊಳ್ಳಲು ಸಹಾಯವಾಗುತ್ತದೆ. ಬೇಡಿಕೆ ಮೀರಿ ಉಳಿದ ಮೀನುಮರಿಗಳನ್ನು ಇತರೆ ಕೃಷಿಕರಿಗೆ ಮಾರಾಟ ಮಾಡಿ ಆರ್ಥಿಕ ಅಭಿವೃದ್ಧಿ ಉತ್ತಮಪಡಿಸಿಕೊಳ್ಳಬಹುದಾಗಿದೆ. ಗ್ರಾಮೀಣ ಪ್ರದೇಶಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೆ ಪೌಷ್ಟಿಕ ಆಹಾರ ಉತ್ಪಾದನೆಗೆ ದಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.
ಕೃಷಿ ಸಂಬಂಧಿತ
ತರಬೇತಿ
ತುಮಕೂರು: ಶಿರಾ ತಾಲೂಕು ಚಿಕ್ಕನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನುರಿತ ಕೃಷಿ ತಜ್ಞರು ಮತ್ತು ಅನುಭವಿ ಪ್ರತಿಭಾವಂತ ಪ್ರಗತಿಪರ ರೈತರನ್ನು ಬಳಸಿಕೊಂಡು ಮೂರರಿಂದ ಐದು ದಿನಗಳ ಅವಧಿಗೆ ವಿವಿಧ ತರಬೇತಿಗಳನ್ನು ಏರ್ಪಡಿಸಲಾಗಿದೆ. ಆಸಕ್ತ ಜಿಲ್ಲೆಯ ಎಲ್ಲಾ ತಾಲೂಕಿನ ರೈತರು ತಮ್ಮ ಹತ್ತಿರದ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ತಾಲೂಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಚಿಕ್ಕನಹಳ್ಳಿ ಇವರನ್ನು ಸಂಪರ್ಕಿಸಿ ತರಬೇತಿಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಉಪ ಕೃಷಿ ನಿರ್ದೇಶಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ವಾ. 9964285200 ಸಂಪರ್ಕಿಸಬಹುದು.
ಬಿಡಾಡಿ ದನಗಳು
ತುಮಕೂರು: ನಗರ ವ್ಯಾಪ್ತಿಯಲ್ಲಿ ಬಿಡಾಡಿ ಜಾನುವಾರುಗಳ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಜಾನುವಾರುಗಳ ಮಾಲೀಕರು 2 ದಿನದೊಳಗಾಗಿ ತಮ್ಮ ಜಾನುವಾರುಗಳನ್ನು ತಮ್ಮ ಅಧೀನದಲ್ಲಿ ಇಡತಕ್ಕದ್ದು, ತಪ್ಪಿದಲ್ಲಿ ಜಾನುವಾರುಗಳನ್ನು ಹಿಡಿದು ಹೊರಸಾಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ನಗರವ್ಯಾಪ್ತಿಯಲ್ಲಿ ಬಿಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯುಂಟಾಗಿದ್ದು, ಬಿಡಾಡಿ ಜಾನುವಾರುಗಳು ಕಂಡು ಬಂದಲ್ಲಿ ಕರ್ನಾಟಕ ಪುರಸಭೆಗಳ ಕಾಯ್ದೆ 1964 ರ ರೀತ್ಯ ಕ್ರಮ ಕೈಗೊಂಡು ಹೊರಸಾಗಿಸಲಾಗುವುದು ಎಂದು ತಿಳಿಸಿದ್ದಾರೆ.