'ಪರಿಸರ ಶುಚಿಯಿಂದ ಡೆಂಘೀ ತಡೆ ಸಾಧ್ಯ'
ಮಾಲೂರು: ಮಲೇರಿಯಾ-ಡೆಂಘೀ ತಡೆಗೆ ಸೂಕ್ತ ಚಿಕಿತ್ಸೆ ಇದ್ದು, ಜ್ವರದಿಂದ ಬಳಲುತ್ತಿರುವವರು ಅಂತಕ ಪಡುವ ಅಗತ್ಯವಿಲ್ಲ ಎಂದು ಆಸ್ವತ್ರೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ಗೌಡ ಹೇಳಿದರು. ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಮಲೇರಿಯಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಅಡಿಯಲ್ಲಿ ಇಲ್ಲಿನ ಸರ್ಕಾರಿ ಆಸ್ವತ್ರೆಯ ಅವರಣದಲ್ಲಿ ಶುಕ್ರವಾರ ಆಯೋಜಿಲಾಗಿದ್ದ ಮಲೇರಿಯಾ, ಡೆಂಘೀ ಜ್ವರ ಸೇರಿದಂತೆ ವಿವಿಧ ಜ್ವರಗಳ ಬಗೆ ಅರಿವು ಮೂಡಿಸುವ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಶೀಘ್ರ ತಪಾಸಣೆ, ತರಿತ್ವ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಜ್ವರ ಬಂದಾಗ ರೋಗಿಗಳು ಅಂತಕ ಪಡಬೇಕಾಗಿಲ್ಲ ಎಂದರು.
ನಾಗರಿಕರು ತಮ್ಮ ಮನೆಯ ಸುತ್ತ ಮುತ್ತ ವಾತವರಣ ಶುಚಿಯಾಗಿ ಇಟ್ಟುಕೊಳ್ಳುವ ಮೂಲಕ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲ, ರೋಗ ಲಕ್ಷಣ ಕಂಡ ತಕ್ಷಣ ರೋಗಿಗಳು ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ತಕ್ಷಣ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.
ತಾಪಂ ಸದಸ್ಯ ಎಸ್.ವಿ. ಲೋಕೇಶ್ ಮಾತನಾಡಿ, ಸೂಳ್ಳೆಗಳಿಂದ ಶೀಘ್ರವಾಗಿ ಹರಡುವ ಈ ಮಲೇರಿಯಾ, ಡೆಂಘೀಯಂತಹ ಜ್ವರವನ್ನು ಆಂದೋಲನ ರೀತಿಯಲ್ಲಿ ತಡೆಯಬೇಕಾಗಿದ್ದು, ಜನಪ್ರತಿನಿಧಿಗಳು, ಸಾರ್ವಜನಿಕರು ಜ್ವರದ ಬಗ್ಗೆ ಅರಿವು ಮೂಡಿಸುವ ಜಾಥಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಅನುರಾಧಾ ಮಾತನಾಡಿದರು. ಹಿರಿಯ ಆರೋಗ್ಯಾಧಿಕಾರಿ ಗೋವಿಂದು, ರಾಜು, ಜಯವೇಣಿ,ಪ್ರೇಮಾ, ವರಲಕ್ಷ್ಮಿ, ಗಂಗಾರಾಮ್, ಪ್ರಸನ್ನ, ಎಂ.ರಾಜು ಇದ್ದರು. ಕಾರ್ಯಕ್ರಮ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಲೇರಿಯಾ, ಡೆಂಘೀ ಸೇರಿದಂತೆ ಇತರೆ ಕಾಯಿಲೆಗಳನ್ನು ತಡೆಯುವ ಬಗ್ಗೆ ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗಿತ್ತು.