'ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಸವಲತ್ತು ಸರಿಯಾಗಿ ತಲುಪಲಿ'
ಚಿಕ್ಕಬಳ್ಳಾಪುರ: ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಬಯೋವುಟ್ರಿಕ್ ಉಪಕರಣ ಬಳಸುವ, ಕಾರ್ಯ ನಿರ್ವಹಣೆ ವಿಧಾನದ ಕುರಿತ ತರಬೇತಿ ಕಾರ್ಯಕ್ರಮ ನಗರದಲ್ಲಿ ಶುಕ್ರವಾರ ನಡೆಯಿತು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನಿಲಯ ಮೇಲ್ವಿಚಾರಕರಿಗೆ ನಿಲಯದ ಪಾಲಕರಿಗಾಗಿ ನಡೆದ ಬಯೋವುಟ್ರಿಕ್ ಉಪಕರಣ ಬಳಸುವ ವಿಧಾನ ಕುರಿತ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಉದ್ಘಾಟಿಸಿದರು.
ಅಗತ್ಯ ಅನುಕೂಲ ಮಾಡಿ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ತಮ್ಮ ಆರ್ಥಿಕ ಸಮಸ್ಯೆಯಿಂದ ವಿದ್ಯಾರ್ಥಿ ನಿಲಯಗಳಿಗೆ ಆಗಮಿಸುತ್ತಾರೆ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಗಳಿಸಬೇಕೆಂಬ ಆಶಯವನ್ನು ಹೊಂದಿರುತ್ತಾರೆ. ನಿಲಯ ಪಾಲಕರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದರು.
ಸಮಸ್ಯೆ ಬಗಿಹರಿಸಿ: ಇತ್ತೀಚೆಗೆ ವಸತಿ ನಿಙಲಯಗಳಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು ಇವುಗಳನ್ನು ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದರ ನಡುವೆ ನಿಲಯ ಪಾಲಕರು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುವಂತೆ ಮಾಡದಿರಲು ಉತ್ತಮವಾಗಿ ಕಾರ್ಯ ನಿರ್ವಹಿಸಿ ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಬೇಕು. ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆಯುವಂತಹ ವಾತಾವರಣ ನಿರ್ಮಾಣಕ್ಕೆ ಸಹಕರಿಸಬೇಕೆಂದು ಸಲಹೆ ನೀಡಿದರು. ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಎಸ್.ಎಚ್.ಪೂಜಾರ್ ಮಾತನಾಡಿ, ನಿಲಯ ಪಾಲಕರು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದು ಸದುಪಯೋಗವಾಗುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು. ಅಧಿಕಾರಿ ಶಾಂತಪ್ಪ ಸೇರಿದಂತೆ ಮತ್ತಿತರರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.