ಶುದ್ಧ ಕುಡಿಯುವ ನೀರು ಕೊಡುವ ನೆಪದಲ್ಲಿ ನಿಯಮ ಉಲ್ಲಂಘಿಸಿದ ಅನಧಿಕೃತ ಘಟಕಗಳು
ಟೇಕಲ್ ಲಕ್ಷ್ಮೀಶ್
ಟೇಕಲ್: ಮಾಲೂರು ತಾಲೂಕಿನಾದ್ಯಂತ ಐಎಸ್ಐ ಪ್ರಮಾಣ ಪಡೆಯದ 10ಕ್ಕೂ ಹೆಚ್ಚು ಶುದ್ಧ ನೀರಿನ ಘಟಕಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶದ ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಮುಚ್ಚಿಸಿದ್ದರೂ ಹಲವು ಘಟಕಗಳು ಮತ್ತೆ ಕದ್ದು ಮುಚ್ಚಿ ಮಾರಾಟ ಮಾಡುತ್ತಿವೆ. ಈ ನಿಟ್ಟಿನಲ್ಲಿ ಇವುಗಳಿಗೆ ಕಡಿವಾಣ ಹಾಕಬೇಕಿದೆ.
ರೋಗ ರುಜಿನ ಭಯದಿಂದ ಮಿನರಲ್ ಕ್ಯಾನ್ ವಾಟರ್ ಕುಡಿಯುವುದು ರೂಢಿಯಾಗಿದೆ. ಈ ನಿಟ್ಟಿನಲ್ಲಿ
ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಕೆಲವರು ಕೊಳವೆ ಬಾವಿಗಳಲ್ಲಿ ಸಿಗುವ ನೀರನ್ನು ಸೋಸಿ 25 ಲೀ. ಕ್ಯಾನ್ನಲ್ಲಿ ತುಂಬಿ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ.
ತಾಲೂಕಿನಾದ್ಯಂತ 10 ಕ್ಕೂ ಹೆಚ್ಚು ಕಡೆ ಇಂತಹ ಅನಧಿಕೃತ ಘಟಕಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ.
ಮಾರಾಟ ದಂಧೆ: ನಾಗರಿಕ ಜೇಬಿಗೆ ಕತ್ತರಿ ಹಾಕಿ ಜೇಬು ತುಂಬಿಸಿಕೊಳ್ಳುತ್ತಿರುವ ಶುದ್ಧ ನೀರಿನ ಘಟಕಗಳು ಯಾವುವು ಐಎಸ್ಐ ಚಿಹ್ನೆ ಹೊಂದಿಲ್ಲ ರಾಜ್ಯ ಹೈಕೋರ್ಟ್, ಐಎಸ್ಐ ಮಾರ್ಕ್ಇಲ್ಲದೆ ಇರುವ ಘಟಕಗಳನ್ನು ಮುಚ್ಚಿಸಲು ಆದೇಶ ನೀಡಿತ್ತು. ಅದೇ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಆದರೂ ರಾಜಾ ರೋಷವಾಗಿ ನೀರಿನ ದಂಧೆ ಮುಂದುವರಿದಿದೆ.
ನೀರಿನ ಸೆಲೆ ಬತ್ತಿದೆ: ತಾಲೂಕಿನಲ್ಲಿ ಕಳೆದ 4 ವರ್ಷಗಳಿಂದ ಬರಗಾಲ ಆವರಿಸಿದೆ. ಕೆರೆಕುಂಟೆಗಳಲ್ಲಿ ನೀರಿನ ಸೆಲೆ ಬತ್ತಿದೆ ಅಂತರ್ಜಲ ಬಳಸಿಕೊಂಡು ರೈತರು ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಸಾವಿರ ಅಡಿಯಲ್ಲಿ ಸಿಗುವ ನೀರನ್ನು ಮೇಲಕ್ಕೆತ್ತಿ ಕ್ಯಾನ್ಗಳಲ್ಲಿ ತುಂಬ ಮಿನರಲ್ ವಾಟರ್ ಎಂದು ತಾಲೂಕಿನಾದ್ಯಂತ ಕುಡಿಯುವ ನೀರನ್ನು ಕ್ಯಾನ್, ಪ್ಯಾಕೆಟ್ಗಳಲ್ಲಿ ತುಂಬಿ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ.
ನೀರನ ದಂಧೆ: ಪಟ್ಟಣ ಪ್ರದೇಶ, ಗ್ರಾಮ ಪ್ರದೇಶ ಸೇರಿದಂತೆ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ ಈ ಹಿನ್ನಲೆಯಲ್ಲಿ ಮೆನಗಳಿಗೆ, ಹೋಟೆಲ್ಗಳಿಗೆ ಸ್ಥಳೀಯವಾಗಿ ದೊರೆಯುವ 25 ಲೀ. ಮಿನರಲ್ ಕ್ಯಾನ್ ನೀರನ್ನೇ ಬಳಸುತ್ತಿದ್ದು, ಕೆಲವರಂತೂ ನೀರನ್ನು ಸರಬರಾಜು ಮಾಡುವುದನ್ನೇ ಕೆಲಸವಾಗಿ ಮಾಡಿಕೊಂಡಿದ್ದಾರೆ. ಕುಡಿಯಲು ಯೋಗ್ಯವಲ್ಲದ ನೀರನ್ನು ಆರ್ಒ ಸಿಸ್ಟಂನಲ್ಲಿ ಶುದ್ಧೀಕರಿಸಿದ್ದೇವೆ. ಲವಣಾಂಶ, ಬ್ಯಾಕ್ಟೀರಿಯಾ ಇಲ್ಲ ನಮ್ಮ ನೀರು ಕುಡಿದರೆ ರೋಗ ಬರುವುದಿಲ್ಲ ಎಂದು ವ್ಯಾಪಾರ ಮಾಡುತ್ತಿದ್ದಾರೆ. ಸರ್ಕಾರದ ನಿಯಮಾನುಸಾರ ಈ ಘಟಕಗಳು ನಡೆಯುತ್ತಿಲ್ಲ.