ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

1374 ಲಕ್ಷ ಕ್ರಿಯಾ ಯೋಜನೆಗೆ ಜಿಪಂ ಅಸ್ತು

Rashmi Kasaragodu
Updated On : 21 Jul 2013, 1:10 am

ಕಪ್ರ. ವಾರ್ತೆ ಕೋಲಾರ ಜು.20
ಜಿಲ್ಲಾ ಪಂಚಾಯ್ತಿ ಇಂಜನಿಯರಿಂಗ್ ವಿಭಾಗದಿಂದ 2013-14ನೇ ಸಾಲಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಸಿದ್ಧಪಡಿಸಿರುವ 13.74 ಕೋಟಿ ರುಪಾಯಿಗಳ ವೆಚ್ಚದ ಕ್ರಿಯಾ ಯೋಜನೆಗೆ ಜಿಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಜಿಪಂ ಅಧ್ಯಕ್ಷೆ ಚೌಡೇಶ್ವರಿ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ ಸದಸ್ಯರು 2013ನೇ ಸಾಲಿನ ಹಣಕಾಸು ಆಯೋಗದಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಒಂದೇ ಕಾಮಗಾರಿಯಡಿ ನಡೆಸಲು ಟೆಂಡರ್ ಕರೆಯದೆ ತುಂಡು ಗುತ್ತಿಗೆ ನೀಡಬೇಕೆಂದು ತಿಳಿಸಿದರು.
ಸರ್ವಾನುಮತದಿಂದ ಅನುಮೋದನೆ: ಜಿಪಂ ಅಧ್ಯಕ್ಷೆ ಚೌಡೇಶ್ವರಿ ಮಾತನಾಡಿ, ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಸಿಎಂಜಿಎಸ್ವೈ ರೆಗ್ಯೂಲರ್ ಯೋಜನೆಗೆ 218.70 ಲಕ್ಷ, ಜಿಪಂ ಕಚೇರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಗೆ 20 ಲಕ್ಷ, ಕೆರೆಗಳ ಪುನಶ್ಚೇತನಕ್ಕೆ 67.22 ಲಕ್ಷ, ಸಣ್ಣ ನೀರಾವರಿ ಕೆರೆಗಳಿಗೆ 97.3 ಲಕ್ಷ ಸೇರಿದಂತೆ ಇನ್ನಿತರೆ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಈಗಿನ ವಿಶೇಷ ಸಾಮಾನ್ಯ ಸಭೆಯಲ್ಲಿ 13ನೇ ಹಣಕಾಸು ಆಯೋಗದಡಿ ರಸ್ತೆಗಳ ನಿರ್ಮಾಣಕ್ಕೆ 294.31 ಲಕ್ಷ, ಜಿ.ಪಂ ಅಭಿವೃದ್ಧಿ ಅನುದಾನ 200 ಲಕ್ಷ, 2012-13ನೇ ಸಾಲಿನ 13ನೇ ಹಣಕಾಸು ಆಯೋಗದ ಅನುಷ್ಠಾನಕ್ಕೆ ಅನುಮೋದನೆ ನೀಡುವಂತೆ ತಿಳಿಸಿದಾಗ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು. ಇದಕ್ಕೂ ಮುನ್ನ ಜಿಪಂ ಇಂಜನಿಯರಿಂಗ್ ವಿಭಾಗದ ಇಇ ದೇವರಾಜ್ ಮಾತನಾಡಿ, 13 ನೇ ಹಣಕಾಸು ಆಯೋಗದಡಿ ರಸ್ತೆಗಳ ನಿರ್ಮಾಣವನ್ನು ಟಂಡರ್ಮೂಲಕ ಒಂದು ಕಾಮಗಾರಿಯಲ್ಲಿ ನಡೆಸಲು ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ ಎಂದು ತಿಳಿಸಿದರು.
ಇದಕ್ಕೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದ ಜಿ.ಪಂ.ಮಾಜಿ ಉಪಾಧ್ಯಕ್ಷ,ಹಾಲಿ ಸದಸ್ಯ ವಡಗೂರು ಹರೀಶ್ ಮಾತನಾಡಿ, ಕಳೆದ ಸಾಲಿನಲ್ಲಿ ಇದೇ ರೀತಿ ಟಿಂಡರ್ ಮೂಲಕ ಒಂದೇ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಲು ಗುತ್ತಿಗೆ ನೀಡಿದ ಪರಿಣಾಮ ತಾಲೂಕಿನಲ್ಲಿ ಒಬ್ಬರು 8 ಲಕ್ಷ ಕಾಮಗಾರಿಗೆ ಕೇವಲ 1.35 ಲಕ್ಷ ಮಾತ್ರ ಬಳಸಿ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಜಿಪಂ ಪೋಸ್ಟ್ ಆಫೀಸ್ ಅಲ್ಲ: ಸರ್ಕಾರ  ಕಳುಹಿಸುವ ಎಲ್ಲ ಸುತ್ತೋಲೆ ಪಾಲಿಸುವುದಕ್ಕೆ ಜಿಪಂ ಪೋಸ್ಟ್ ಆಫೀಸ್ ಅಲ್ಲ ಎಂದು ಕಿಡಿಕಾರಿದ ಅವರು, ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ತೆಗೆದುಕೊಂಡಿರುವ ನಿರ್ಧಾರವನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಜಿಪಂ ಸದಸ್ಯ ಅ.ಮು.ಲಕ್ಷ್ಮೀನಾರಾಯಣ ಮತ್ತು ರಾಮಸ್ವಾಮಿರೆಡ್ಡಿ ಮಾತನಾಡಿ, ಕಾಮಗಾರಿ ಗುಣಮಟ್ಟದ ಹಿನ್ನಲೆಯಲ್ಲಿ ತುಂಡು ಗುತ್ತಿಗೆ ನೀಡುವುದು ಸೂಕ್ತವೆಂದರು.
ಅಂಗವಿಕಲರ ಅನುಕೂಲ ಕಲ್ಪಿಸಿ: ಅಂಗವಿಕಲರ ಸೌಲಭ್ಯಕ್ಕಾಗಿ  ರು.17ಲಕ್ಷ ಕಾದಿರಿಸಿದ್ದು ಇದನ್ನು ವೆಚ್ಚ ಮಾಡಲು ಸಭೆಯ ಅನುಮತಿ ಕೋರಿದಾಗ ಸದಸ್ಯರು ಅಂಗವಿಕಲರಿಗೆ ಅನುಕೂಲವಾಗುವಂತಹ ಸಲಕರಣೆ ನೀಡಲು ಸಲಹೆ ನೀಡಿದರು.
ತಾಪಂನಲ್ಲಿ ಸಭೆ ಕರೆಯಿರಿ: ಕೃಷಿ, ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್ ಮಾತನಾಡಿ, ತಾಪಂ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಬೇಕಾದರೆ ಜಿಪಂ ಅಧ್ಯಕ್ಷರು, ಸಿಇಒ ಸೇರಿದಂತೆ ಆಯಾ ತಾಲೂಕುಗಳ ಜಿಪಂ ಸದಸ್ಯರು ಹಾಗೂ ತಾಲೂಕಿನ ಚುನಾಯಿತ ಪ್ರತಿನಿಧಿಗಳು, ಗ್ರಾಪಂ ಪಿಡಿಒಗಳು ಹಾಗೂ ಕಾರ್ಯದರ್ಶಿಗಳ ಸಭೆಗಳನ್ನು ಕರೆದು ಕುಂದು ಕೊರತೆಗಳ ಬಗ್ಗೆ ವಿಚಾರಿಸಬೇಕು ಹಾಗೂ ಯೋಜನೆಗಳ ಅನುಷ್ಠಾನದ ಬಗ್ಗೆ ಪರಾಮರ್ಶೆ ಮಾಡಬೇಕೆಂದು ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಸಿಇಒ ಝುಲ್ಫಿಖಾರ್ ಉಲ್ಲಾ, ಇನ್ನು ಮುಂದೆ ತಾಪಂಗಳಲ್ಲೇ ಸಭೆ ಕರೆದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಿಬ್ಬಂದಿ ಕೊರತೆ: ತಾಪಂ ಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೂ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆಯಲ್ಲದೆ ನರೇಗಾ ಕಾಮಗಾರಿಗಳಿಗೆ ಸಂಬಂಧಿಸಿದ ಕೂಲಿ ಹಣವನ್ನು ಕೂಲಿಕಾರರ ಬ್ಯಾಂಕ್ ಖಾತೆಗೆ ನೇರ ಜಮಾ ಆಗುತ್ತಿದೆ. ಇದಕ್ಕೆ ಹಣದ ಕೊರತೆ ಇರುವುದಿಲ್ಲ ಎಂದು ಸದಸ್ಯರ ಪ್ರಶ್ನೆಗೆ ಸ್ಪಷ್ಪನೆ ನೀಡಿದರು.
ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಮಾತನಾಡಿ, ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ಸೂರಿಗಾಗಿ ಸಾಕಷ್ಟು ಮಂದಿ ಕಾಯುತ್ತಿದ್ದಾರೆ ಎಂದು ಗಮನ ಸೆಳೆದರು.
ಜಿಪಂ ಉಪಾಧ್ಯಕ್ಷೆ ರತ್ನಮ್ಮಗಣೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ, ಸಿಮೋಲ್, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement