ಕೊನೆಗೂ ಕಸ ವಿಲೇವಾರಿ ಮಾಡಿದ ನಗರಸಭೆ
ಕೆಜಿಎಫ್: ಅಂತು ಇಂತು 'ಕನ್ನಡಪ್ರಭ' ವರದಿಯಿಂದ ಎಚ್ಚೆತ್ತುಕೊಂಡ ಕೆಜಿಎಫ್ ನಗರಸಭೆ ಕಾರ್ಯಾಲಯ ಸಿಬ್ಬಂದಿ ವತಿಯಿಂದ ಉರಿಗಾಂಪೇಟೆ ಮುಖ್ಯರಸ್ತೆಯಲ್ಲಿ ತಿಂಗಳುಗಟ್ಟಲೆ ರಾಶಿ ರಾಶಿಯಾಗಿ ಬಿದಿದ್ದ ಕಸವನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ವಿಲೇವಾರಿ ಮಾಡಿ, ಸ್ವಚ್ಛಗೊಳಿಸಿ ಡಿಡಿಟಿ ಪೌಡರ್ ಸಿಂಪಡಿಸುವ ಕಾರ್ಯ ಕೈಗೊಳ್ಳಲಾಯಿತು. ಕೆಜಿಎಫ್ ಬಸ್ನಿಲ್ದಾಣ ಹಾಗೂ ಎಂ.ಜಿ.ಮಾರುಕಟ್ಟೆ ಸಮೀಪದ ಉರಿಗಾಂಪೇಟೆ ರಸ್ತೆಯಲ್ಲಿ ಹಲವು ತಿಂಗಳಿಂದ ರಾಶಿ ರಾಶಿಯಾಗಿ ಬಿದ್ದಿದ್ದ ಕಸ ವಿಲೇವಾರಿಯಾಗದೆ, ದುರ್ನಾತ ಬೀರುತ್ತಿತ್ತು.
ಈ ನಿಟ್ಟಿನಲ್ಲಿ 'ಕನ್ನಡಪ್ರಭ' ಶುಕ್ರವಾರ ಸಂಚಿಕೆಯಲ್ಲಿ ಈ ಸಂಬಂಧ ಬೆಳಕು ಚೆಲ್ಲಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರಸಭೆ ಪೌರಾಯುಕ್ತ ವಿ.ಬಾಲಚಂದರ್ ಮಾರ್ಗದರ್ಶನ ಮೇರೆಗೆ ಶನಿವಾರ ನಗರಸಭೆ ಅಧಿಕಾರಿಗಳು, ಸಿಬಂದ್ದಿ ಕಸ ವಿಲೇವಾರಿ, ಚರಂಡಿ ಸ್ವಚ್ಛತೆಗೊಳಿಸಿ ಡಿಡಿಟಿ ಸಿಂಪಡಿಸಿದರು. ನಗರಸಭೆ ವತಿಯಿಂದ ಕಸ ವಿಲೇವಾರಿಯಾಗುತ್ತಿರುವುದನ್ನು ಕಂಡ ವಾಹನ ಚಾಲಕರು, ಮಹಿಳೆಯರು, ಯುವಕರು, ವೃದ್ಧರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು.