'ಪ್ರಾಮಾಣಿಕ ಸೇವೆಗೆ ಸಂದ ಫಲ'
ಗೌರಿಬಿದನೂರು: ಅವಿಭಜಿತ ಜಿಲ್ಲೆಯ ಸ್ವಾತಂತ್ರ್ರ್ಯಹೋರಾಟ, ತಾಲೂಕಿನ ವಿದುರಾಶ್ವತ್ಥ ಧ್ವಜಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟ, ತಾಲೂಕಿನ ಜನರು ಸತತ 4 ಬಾರಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದರಿಂದ ವಿಧಾನಸಭೆ ಉಪಸಭಾಪತಿಯಂತಹ ಗೌರವಾನ್ವಿತ ಹುದ್ದೆ ದೊರೆತಿದೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ಉಪ ಸಭಾಧ್ಯಕ್ಷರಾದ ನಂತರ ಕಾಂಗ್ರೆಸ್ನಿಂದ ಗೌರಿಬಿದನೂರು ಪಟ್ಟಣದ ಸೂರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಅಭಿಮತವನ್ನು ಗುರುತಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮೊಯ್ಲಿ, ಆಸ್ಕರ್, ಖರ್ಗೆ, ಮುನಿಯಪ್ಪ, ರೆಹಮಾನ್ ಖಾನ್, ವಿರೋಧ ಪಕ್ಷದ ನಾಯಕರಾದ ಕುಮಾರಸ್ವಾಮಿ, ಶ್ರೀರಾಮುಲು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪುಟ್ಟಣ್ಣಯ್ಯ, ಅಶೋಕ್ ಖೇಣಿ ಅವರು ನನಗೆ ಸೂಚಿಸುವ ಮೂಲಕ ನನ್ನ ಸೇವೆಯನ್ನು ಗೌರವಿಸಿದ್ದಾರೆ ಎಂದರು.
ನನ್ನ ಜವಾಬ್ದಾರಿಯನ್ನು ಸಮರ್ಥ ಹಾಗೂ ಗೌರವಯುತವಾಗಿ ನಡೆಸುತ್ತೇನೆ. ತಾಲೂಕಿನ ಜನತೆಯ ಸಮಸ್ಯೆಗೆ ಸ್ಪಂದಿಸಲು ಗೌರಿಬಿದನೂರು ಪಟ್ಟಣದಲ್ಲಿ ಕಚೇರಿ ತೆರೆದಿದ್ದೇನೆ. ಜನರಿಂದ ಬಂದ ಅಹವಾಲುಗಳಿಗೆ ಆದ್ಯತೆಯ ಮೇಲೆ ಸ್ಪಂದಿಸುತ್ತೇನೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಪಿಎಲ್ ಡಿಬ್ಯಾಂಕ್ ಅಧ್ಯಕ್ಷ ಮದನಗೋಪಾಲ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಸತೀಶ್, ಪ್ರಧಾನ ಕಾರ್ಯದರ್ಶಿ ವೆಂಕಟರಮಣ, ಯುವ ಕಾಂಗ್ರೆಸ್ ಅಧ್ಯಕ್ಷ ವೇಣುಗೋಪಾಲ್, ಪ್ರಕಾಶ್ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ಜಯಂಧರ್, ಮರಳೂರು ಹನುಮಂತರೆಡ್ಡಿ, ಹೋರಾಟಗಾರರಾದ ಬ್ರಹ್ಮಯ್ಯ, ಗುಣಪಾಲಯ್ಯ, ಕೆ.ಎಚ್. ಹನುಮಪ್ಪರೆಡ್ಡಿ ಉಪಸ್ಥಿತರಿದ್ದರು.