ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಆಗ್ರಹ

Rashmi Kasaragodu
Updated On : 21 Jul 2013, 1:17 am

ಕ.ಪ್ರ.ವಾರ್ತೆ  ಕೋಲಾರ  ಜು. 20
ತಾಂತ್ರಿಕ ಶಿಕ್ಷಣ ಮಂಡಳಿಯ ಕೆಲವು ಅವೈಜ್ಞಾನಿಕ ನೀತಿಗಳಿಂದ ಸಾವಿರಾರು ಡಿಪ್ಲೊಮೋ ವಿದ್ಯಾರ್ಥಿಗಳು ಬೀದಿಪಾಲಾಗುವ ಪರಿಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಹೊರಲಾರದಷ್ಟು ಕಠಿಣ ಮತ್ತು ಅವೈಜ್ಞಾನಿಕ ಪಠ್ಯಕ್ರಮ ಹಾಗು ಪರೀಕ್ಷಾ ನೀತಿಗಳನ್ನು ಜಾರಿಗೊಳಿಸಿದ್ದು, ಕೂಡವೇ ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅಂಬರೀಷ್ ನೇತೃತ್ವದಲ್ಲಿ ನಗರದ ವಿವಿಧ ಡಿಪ್ಲೊಮೋ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ನಿಯೋಗ ತೆರಳಿ ಪ್ರತಿಭಟನೆ ನಡೆಸಿದರು.
ಅರ್ಹ ಪ್ರಾಧ್ಯಾಪಕರ ಕೊರತೆ: ರಾಜ್ಯದಲ್ಲಿ ಹೊಸ ಪಠ್ಯಕ್ರಮಕ್ಕನುಗುಣವಾಗಿ ಭೋದನೆ ಮಾಡುವ ಅರ್ಹ ಪ್ರಾಧ್ಯಾಪಕರ ಕೊರತೆಯಿದೆ ಹಾಗೂ ಅದಕ್ಕೆ ಬೇಕಾಗುವ ಅಧ್ಯಯನ ಸಾಮಾಗ್ರಿಗಳನ್ನು ಒದಗಿಸದಿರುವುದರಿಂದ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ ಎಂದು ದೂರಿದರು.
ರಾಜ್ಯದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಸಂಪೂರ್ಣವಾಗಿ ಮಾರಾಟವಾಗುತ್ತಿದೆ ಮತ್ತು ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ವಿಪರೀತ ಶುಲ್ಕ ವಸೂಲಿ ಹಾಗೂ ಹಾಜರಾತಿ, ಆಂತರಿಕ ಅಂಕಗಳು ನೆಪವೊಡ್ಡಿ ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು, ಅನೇಕ ರೀತಿಯಲ್ಲಿ ಹಣ ಸುಲಿಗೆ ಮಾಡುವುದು ಎಥೇಚ್ಚವಾಗಿ ನಡೆಯುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಸೌಲಭ್ಯಗಳಿಂದ ವಂಚಿತ: ರಾಜ್ಯದ ಅನೇಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಹೊಸದಾಗಿ ರೂಪಿಸಿರುವ ಪಠ್ಯಕ್ರಮ, ಪರೀಕ್ಷಾ ನೀತಿಗಳು, ತರಗತಿಗಳು ಮುಗಿಯುವ ಮುನ್ನವೇ ಪರೀಕ್ಷೆಗಳು ಪ್ರಾರಂಭವಾಗುವುದು, ಶೇ.50ರಷ್ಟು ಪಠ್ಯಕ್ರಮ ಮುಗಿಯದಿದ್ದರೂ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾಗಿದೆ. ಅಲ್ಲದೇ ಮೌಲ್ಯಮಾಪನ ಸರಿಯಾಗಿ ನಡೆಸದೆ ಇರುವುದು ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದು ಇದಕ್ಕೆ ತಾಂತ್ರಿಕ ಶಿಕ್ಷಣ ಮಂಡಳಿ ನೀತಿಗಳೇ ಕಾರಣ ಹೊರತು, ವಿದ್ಯಾರ್ಥಿಗಳಲ್ಲ ಎಂದು ತಿಳಿಸಿದ್ದಾರೆ. ಎಸ್ಎಫ್ಐ ಜಿಲ್ಲಾಧ್ಯಕ್ಷ ವಿ.ಅಂಬರೀಷ್, ನಗರ ಸಂಚಾಲಕ ಮುಸ್ತಾಫ್, ವಿದ್ಯಾರ್ಥಿಗಳಾದ ಸುಕೀರ್ತಿ, ಕಿರಣ್, ಮಂಜುನಾಥ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement