'ಹೊಗಳಿಕೆ, ತೆಗಳಿಕೆಗೆ ಕಿವಿಗೊಡಬೇಡಿ'
ಬಾಗೇಪಲ್ಲಿ: ಪತ್ರಕರ್ತರು ಹೊಗಳಿಕೆ, ತೆಗಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು ಕಿವಿಮಾತು ಹೇಳಿದ್ದಾರೆ.
ಇಲ್ಲಿನ ಕ್ರೀಡಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿನ ಓರೆ-ಕೋರೆ ತಿದ್ದುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ಪತ್ರಕರ್ತರು ಒಂದಿಲ್ಲೊಂದು ಕಾರಣಕ್ಕಾಗಿ ಸದಾ ಒತ್ತಡದ ಜೀವನವನ್ನು ನಡೆಸಬೇಕಾದಂತಹ ಪರಿಸ್ಥಿತಿ ಇರುತ್ತದೆ. ಈ ನಿಟ್ಟಿನಲ್ಲಿ ಒತ್ತಡದ ಜೀವನದಿಂದ ಹೊರ ಬಂದು ಉಲ್ಲಾಸದಿಂದ ಇರಲು ಈ ರೀತಿಯ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚಿ.ವೀರಶೇಖರ್ ಮಾತನಾಡಿ, ಮೇಣದ ಬತ್ತಿಯು ಉರಿಯುವ ಸಮಯದಲ್ಲಿ ತನ್ನ ಸುತ್ತಮತ್ತಲಿನ ಕತ್ತಲೆಯನ್ನು ಓಡಿಸಿ ಬೆಳಕು ನೀಡುತ್ತದೆ. ಹಾಗೆಯೇ ಸಂಪೂರ್ಣವಾಗಿ ಕರಗಿ ಹೋಗುತ್ತದೆ. ಅದೇ ರೀತಿ ಪತ್ರಕರ್ತರು ಸದಾ ಮೇಣದ ಬತ್ತಿಯಂತೆ ಸಮಾಜಕ್ಕೆ ಬೆಳಕನ್ನು ನೀಡುತ್ತಾ ಕರಗಿ ಹೋಗುತ್ತಾರೆ ಎಂದರು.
ಪತ್ರಕರ್ತರ ಬದುಕು ಕೇವಲ ಬರಹಗಳಿಗೆ ಸೀಮಿತವಾಗಬಾರದು.ಕೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಡೆಗೂ ಪತ್ರಕರ್ತರು ಗಮನ ನೀಡಿದಾಗ ಮನಸ್ಸು ಮತ್ತಷ್ಟು ಗಟ್ಟಿಯಾಗುತ್ತದೆ ಎಂದ ಅವರು, ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಈ ರೀತಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿ ಹಮ್ಮಿಕೊಂಡು ಒಂದೇ ಕುಟುಂಬದವರಂತೆ ಪಾಲ್ಗೊಳ್ಳುವುದರಿಂದ ಮನಸಿಗೆ ಉಲ್ಲಾಸ ಸಿಗುತ್ತದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ಸೈಯದ್ ಸಿದ್ದಿಕಿ, ಖಜಾಂಚಿ ವಿ.ಅಶ್ವತ್ಥನಾರಾಯಣ, ಜಿಲ್ಲಾ ಸಮಿತಿ ಸದಸ್ಯರಾದ ಬಿ.ಟಿ.ಚಂದ್ರಶೇಖರರೆಡ್ಡಿ, ಶಂಕರರಾವ್, ಜಿ.ವೆಂಕಟೇಶ್, ತಾಲೂಕು ಪದಾಧಿಕಾರಿಗಳಾದ ಜೆ.ಕೆ.ಆನಂದ್ ಇದ್ದರು.
ತೀರ್ಪುಗಾರರಾಗಿ ಎಸ್.ಹೆಚ್.ಆದಿನಾರಾಯಣ, ಅಂಜಿನಪ್ಪ, ಆರ್.ನರಸಿಂಹಪ್ಪ ಮತ್ತಿತರರು ನಿರ್ವಹಿಸಿದರು.