ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಜಗಳೂರು: ಕಲುಷಿತ ನೀರು ಸೇವೆನೆಯಿಂದಾಗಿ ವಾಂತಿ, ಬೇಧಿಯಾಗಿ ತೀವ್ರ ಅಸ್ವಸ್ಥಗೊಂಡಿದ್ದ ಸುಮಾರು 15ಕ್ಕೂ ಹೆಚ್ಚು ಗ್ರಾಮಸ್ಥರನ್ನು ಜಗಳೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ತಾಲೂಕಿನ ರಾಜನಹಟ್ಟಿ ಗ್ರಾಮದಲ್ಲಿ ಭಾನುವಾರ ವರದಿಯಾಗಿದೆ. ಕೆಚ್ಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ರಾಜನಹಟ್ಟಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಶನಿವಾರ ಒಡೆದು ಹೋಗಿದೆ. ಅದನ್ನು ಯಾರೂ ಸಹ ಗಮನಿಸಿಲ್ಲ. ಕಳೆದ 3- 4 ದಿನದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಯಾರ ಗಮನಕ್ಕೂ ಈ ವಿಚಾರ ಬಂದಿಲ್ಲ. ಮಳೆ ನೀರು ಸೇರಿದಂತೆ ಕಲುಷಿದ ನೀರೆಲ್ಲವೂ ಪೈಪ್‌ಲೈನ್‌ನಲ್ಲಿ ಸೇರಿದೆ. ಗ್ರಾಮಕ್ಕೆ ಕುಡಿಯುವ ನೀರು ಪೂರೈಸಿದಾಗ ಕಲುಷಿತ ನೀರನ್ನೇ ಗ್ರಾಮಸ್ಥರು ಅರಿವಿಲ್ಲದಂತೆ ಸೇವಿಸಿದ್ದಾರೆ. ಅನೇಕ ಮನೆಗಳಲ್ಲಿ ನೀರನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಮಳೆ ನೀರು, ಕಲ್ಮಷದ ನೀರು ಸೇರಿದ್ದ ನೀರನ್ನು ಸಂಜೆ ಹೊತ್ತಿಗೆ ಸೇವಿಸಿದ ಗ್ರಾಮಸ್ಥರಲ್ಲಿ ತೀವ್ರ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೆಲವರಂತೂ ತೀವ್ರ ಅಸ್ವಸ್ಥರಾಗಿ, ನಿತ್ರಾಣಗೊಂಡಿದ್ದರು.ರಾಜನಹಟ್ಟಿ ಗ್ರಾಮದ ಅಸ್ವಸ್ಥರನ್ನು ಶನಿವಾರ ಸಂಜೆಯಿಂದಲೇ ತಕ್ಷಣ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿ ಸಿದೆ. ಭಾನುವಾರವೂ ಸಹ ಕೆಲವರು ತೀವ್ರ ಅಸ್ವಸ್ಥರಾಗಿದ್ದುದು ಕಂಡು ಬಂದಿತು. ನಿತ್ರಾಣರಾದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಗಳೂರು ತಾ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಕೆಲವರನ್ನು ಆಸ್ಪತ್ರೆ ಒಳರೋಗಿಗಳಾಗಿ ದಾಖಲು ಮಾಡಲಾಗಿದೆ.