ಜಿಲ್ಲಾ ಬಿಜೆಪಿಗೆ ಕೃಷ್ಣಾರೆಡ್ಡಿ ಹೊಸ ಸಾರಥಿ
ಕ.ಪ್ರ.ವಾರ್ತೆ ಕೋಲಾರ ಜು. 21
ನಾವಿಕನಿಲ್ಲದ ಹಡಗಿನಂತಾಗಿದ್ದ ಜಿಲ್ಲಾ ಬಿಜೆಪಿಗೆ ಮಾಲೂರು ತಾಲೂಕಿನ ಎಸ್.ಕೃಷ್ಣಾರೆಡ್ಡಿ ಅವರನ್ನು ಸಾರಥಿಯಾಗಿ ನೇಮಿಸಲಾಗಿದೆ.
ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳ ನಡುವೆಯೂ ಪಕ್ಷದ ವರಿಷ್ಠರು ಪಕ್ಷದ ಹಳೆಯ ಕಾರ್ಯಕರ್ತ, ಮಾಲೂರಿನ ಎಪಿಎಂಸಿ ಮಾಜಿ ಅಧ್ಯಕ್ಷರಾಗಿದ್ದ ಎಸ್.ಕೃಷ್ಣಾರೆಡ್ಡಿ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಒಕ್ಕಲಿಗರ ಮನಗೆಲ್ಲುವುದಕ್ಕೆ ಬುನಾದಿ ಹಾಕಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಎನ್.ಲಕ್ಷ್ಮಯ್ಯ ಅವರ ಅಧಿಕಾರದ ಅವಧಿ ಕಳೆದ ವರ್ಷ ನವೆಂಬರ್ನಲ್ಲೇ ಅಂತ್ಯಗೊಂಡಿತ್ತಾದರೂ ರಾಜ್ಯ ಮುಖಂಡರು ಚುನಾವಣೆಗಳ ಹಿನ್ನಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆಯನ್ನು ಮುಂದೂಡಿದ್ದರು.
ಜಿಲ್ಲೆಯಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕೆ ರಾಜಕೀಯ ರಣತಂತ್ರ ರೂಪಿಸುವಲ್ಲಿ ವಿಫಲರಾಗಿ ಕಾರ್ಯಕರ್ತರಿಂದ ಟೀಕೆಗೆ ಗುರಿಯಾಗಿದ್ದ ಎನ್.ಲಕ್ಷ್ಮಯ್ಯ, ಕೆಲ ಮುಖಂಡರ ಅಸಹಕಾರದಿಂದ ಪಕ್ಷ ಸಂಘಟನೆ ಆಗುತ್ತಿಲ್ಲ ಎಂದು ಬೇಸತ್ತು ಪಕ್ಷ ಚಟುವಟಿಕೆಯಿಂದ ದೂರ ಉಳಿದಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಮುಖಭಂಗ, ಮಾಲೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಮಾಜಿ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಹೈಜಾಕ್ ಮಾಡುವ ಮೂಲಕ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದ ಪ್ರಸಂಗಗಳಿಂದ ಎಚ್ಚೆತ್ತ ವರಿಷ್ಠರು ಮಾಜಿ ಶಾಸಕ ನಂದೀಶ್ ರೆಡ್ಡಿ, ಬಿಬಿಎಂಪಿ ಸದಸ್ಯ ಶಿವಕುಮಾರ್ ಅವರನ್ನು ಕೋಲಾರ ಜಿಲ್ಲೆಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಪಕ್ಷ ಉಳಿಸಲು ಕ್ರಮ ಜರುಗಿಸುವಂತೆ ಸೂಚಿಸಿದ ಹಿನ್ನೆಲೆ ಈ ಇಬ್ಬರು ಮುಖಂಡರು ಜಿಲ್ಲೆಯ ಮುಖಂಡರ ಅಭಿಪ್ರಾಯ ಸಂಗ್ರಹಣೆ ನಂತರ ಈ ಬಾರಿ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ತೀರ್ಮಾನಿಸಿ ಮಾಲೂರು ತಾಲೂಕಿನ ಎಸ್.ಕೃಷ್ಣಾರೆಡ್ಡಿ ಅವರಿಗೆ ಸಂಘಟನೆಯ ಜವಾಬ್ದಾರಿ ವಹಿಸಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುಮಾರು 11 ಮಂದಿ ಆಕಾಂಕ್ಷಿತರಾಗಿದ್ದರು. ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ನಂದೀಶ್ ರೆಡ್ಡಿ ಮತ್ತು ಶಿವಕುಮಾರ್ ಜಿಲ್ಲಾದ್ಯಂತ ಅಭಿಪ್ರಾಯ ಸಂಗ್ರಹಿಸಿದಾಗ ಬಹುತೇಕರು ಕೃಷ್ಣಾರೆಡ್ಡಿ ಅವರ ಹೆಸರು ಸೂಚಿಸಿದ್ದರಿಂದ ವರಿಷ್ಠರು ಅವಿರೋಧ ಆಯ್ಕೆ ಮಾಡಿ ಭಾನುವಾರ ನಡೆದ ಸಮಾರಂಭದಲ್ಲಿ ಕೃಷ್ಣಾರೆಡ್ಡಿ ಅವರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ವಹಿಸಿದ್ದಾರೆ.
ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ನಿರ್ಗಮನದಿಂದ ಬಡವಾಗಿದ್ದ ಮಾಲೂರು ಬಿಜೆಪಿಗೂ ಕೃಷ್ಣಾರೆಡ್ಡಿ ಶಕ್ತಿ ತುಂಬಬೇಕಾಗಿದೆ. ಅಲ್ಲದೆ, ಇಡೀ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಪಕ್ಷಕ್ಕೆ ಮತ್ತೆ ಪುನಶ್ಚೇತನ ನೀಡುವ ಜವಾಬ್ದಾರಿ ವಹಿಸಿರುವುದರಿಂದ ಪಕ್ಷ ಎಷ್ಟರಮಟ್ಟಿಗೆ ಬಲವರ್ಧನೆ ಆಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.
ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಎನ್.ಲಕ್ಷ್ಮಯ್ಯ ಗೈರು ಹಾಜರಾಗಿದ್ದು ಚರ್ಚೆಗೆ ಗ್ರಾಸವಾಯಿತು. ಮಾಲೂರು ತಾಲೂಕಿನಿಂದ ಅತಿ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಮೂಲಕ ಬಿಜೆಪಿ ಮಾಲೂರಿನಲ್ಲಿ ಇನ್ನು ಜೀವಂತಾಗಿದೆ ಎಂಬುದನ್ನು ಸಾಬೀತು ಮಾಡಿದರು.
ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಅವರ ಬೆಂಬಲಿಗರಾದ ಜಿ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.
ಕೃಷ್ಣಾರೆಡ್ಡಿ ಅವರಿಗೆ ಅಧಿಕಾರ ವಹಿಸಿಕೊಟ್ಟ ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರು ಭಿನ್ನಾಭಿಪ್ರಾಯ ತೊರೆದು ಜಿಲ್ಲೆಯಲ್ಲಿ ಕಮಲ ಧ್ವಜವನ್ನು ಹಾರಿಸಲು ಸಂಕಲ್ಪ ತೊಡಿ ಎಂದು ಕರೆ ನೀಡಿದರು.
ರಾಷ್ಟ್ರದ ಮತದಾರರಲ್ಲಿ ಶೇ.80 ರಷ್ಟು ಮಂದಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂದಿನ ಪ್ರಧಾನಿ ಆಗಲಿ ಎಂದು ಅಪೇಕ್ಷಿಸಿದ್ದಾರೆ. ಇದು ಈಡೇರಬೇಕಾದರೆ ಬಿಜೆಪಿ ಕೋಲಾರದಲ್ಲೂ ಬಿಜೆಪಿ ಗೆಲ್ಲಬೇಕಾಗಿರುವುದರಿಂದ ಕಾರ್ಯಕರ್ತರು ಶ್ರಮಿಸಬೇಕೆಂದು ತಿಳಿಸಿದರು.
ಎಲ್ಲರನ್ನು ಒಂದಾಗಿ ಕರೆದುಕೊಂಡು ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವ ಹೊಣೆ ನೂತನ ಅಧ್ಯಕ್ಷ ಕೃಷ್ಣಾರೆಡ್ಡಿ ಅವರ ಮೇಲಿದೆ ಎಂದು ತಿಳಿಸಿದರು. ಪಕ್ಷದ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಬಿಬಿಎಂಪಿ ಸದಸ್ಯ ಶಿವಕುಮಾರ್, ಇಂದು ದೇಶದ ಆಂತರಿಕ ಭದ್ರತೆಗೆ ಧಕ್ಕೆ ಬಂದಿದೆ. ಚೀನಾ ಒಂದು ಕಡೆ ನುಗ್ಗಲು ಸಿದ್ಧವಾಗಿದೆ, ಪಾಕ್ ಭಯೋತ್ಪಾದಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ದೇಶ ರಕ್ಷಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಇದರಿಂದ ಕೇಂದ್ರದಲ್ಲಿ ಈ ಬಾರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಗೆ ನಾವೆಲ್ಲ ಶ್ರಮಿಸುವುದು ಅನಿವಾರ್ಯವಾಗಿದೆ ಎಂದರು.
ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿರುವ ಕೆ.ಎಚ್. ಮುನಿಯಪ್ಪ ಬಗ್ಗೆ ಇಲ್ಲಿನ ಜನತೆಗೆ ಬೇಸರವಿದೆ. ಇಂತಹ ಸಮಯದಲ್ಲಿ ಇಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸಿ ಎಂದರು.
ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಈಗ ಪಕ್ಷಕ್ಕೆ ಅಧಿಕಾರವಿಲ್ಲ, ಒಳಜಗಳ, ಸಂಘಟನೆ ಕೊರತೆಯಿಂದ ಆದ ನಷ್ಟದ ಅರಿವು ಎಲ್ಲರಿಗೂ ಆಗಿದೆ. ಈಗ ಒಂದಾಗುವ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದರು. ಮಾಜಿ ಶಾಸಕ ವೈ.ಸಂಪಂಗಿ, ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳಬೇಕು, ಇದಕ್ಕೆ ನೂತನ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಮುಖಂಡರಾದ ವೈ.ಸುರೇಂದ್ರಗೌಡ, ನಿವೃತ್ತ ನೌಕರರ ಪ್ರಕೋಷ್ಠದ ಅಧ್ಯಕ್ಷ ರಂಗಪ್ಪ, ಕೆಎಂಎಫ್ ನಿರ್ದೇಶಕರಾದ ಪ್ರಮೀಳಾ ಮಲ್ಲಿಕಾರ್ಜುನ್, ಕಾರ್ಪೋರೇಟರ್ ವೀರಣ್ಣ, ರಘುನಾಥ್, ರಾಷ್ಟ್ರೀಯ ಯುವ ಮೋರ್ಚಾದ ಮೋಹನ್ ರೆಡ್ಡಿ, ಜಿಪಂ ಸದಸ್ಯ ಎಂ.ಎಸ್.ಆನಂದ್, ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೌರ್ಯ, ಬೆಗ್ಲಿ ಶಿರಾಜ್, ವೆಂಕಟೇಗೌಡ, ಕೋಶಾಧ್ಯಕ್ಷ ಸತ್ಯನಾರಾಯಣರಾವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಚಲಪತಿ, ಬೆಗ್ಲಿ ಸಿರಾಜ್ ಮತ್ತಿತರರಿದ್ದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಶಂಕರ್ ನಿರೂಪಿಸಿ, ಉಪಾಧ್ಯಕ್ಷ ಕನ್ನೆತ್ತ ಮುನಿವೆಂಕಟಪ್ಪ ಸ್ವಾಗತಿಸಿ, ವಂದಿಸಿದರು.