ಬಾಗೇಪಲ್ಲಿ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ವಜಾ
ಕೋಲಾರ: ರೈತರ ಸಾಲ ಮನ್ನಾ ಮತ್ತು ಪರಿಹಾರದ ಹಣ 39.50 ಲಕ್ಷ ರು.ಗಳನ್ನು ದುರುಪಯೋಗ ಆರೋಪ ಹೊತ್ತಿದ್ದ ಬಾಗೇಪಲ್ಲಿ ಡಿಸಿಸಿ ಬ್ಯಾಂಕಿನ ಮ್ಯಾನೇಜರ್ ಎ.ವಿ. ಶ್ರೀನಿವಾಸ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಸರ್ಕಾರದ ಹಣವನ್ನು ರೈತರಿಗೆ ನೀಡದೆ ದುರುಪಯೋಗ ಮಾಡಿಕೊಂಡಿದ್ದ ಎ.ವಿ. ಶ್ರೀನಿವಾಸ್ ಅವರನ್ನು ಅಮಾನತುಪಡಿಸಿ ವಿಚಾರ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆರೋಪ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸಿಇಒ ವೆಂಕಟೇಶಪ್ಪನವರು ಆರೋಪಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜನಾರ್ದನ ರೆಡ್ಡಿ ಬೆಂಬಲಿಸಲು ಮನವಿ
ಚಿಂತಾಮಣಿ: ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಪ್ರೌಢಶಾಲಾ ಸಹಶಿಕ್ಷಕರ ವಿಭಾಗದ ಅಭ್ಯರ್ಥಿ ಬಿ.ಜನಾರ್ದನ ರೆಡ್ಡಿ ಅವರನ್ನು ಅಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡಬೇಕೆಂದು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಉಪಾಧ್ಯಕ್ಷ ಆರ್.ವೆಂಕಟರಮಣಾರೆಡ್ಡಿ ಹಾಗೂ ತಾಲೂಕು ಅಧ್ಯಕ್ಷ ಬಿ.ಮಂಜುನಾಥ್ ಪ್ರೌಢಶಾಲಾ ಸಹಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ. ಪಟ್ಟಣದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಇಸಿಒ ಆಗಿ ಕಾರ್ಯನಿರ್ವಹಿಸಿ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಗ್ರಾಮಮಟ್ಟದಿಂದ ಪಟ್ಟಣದವರೆಗೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಹಾಗೂ ಕಳೆದ ಹಲವು ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಬಿ.ಜನಾರ್ದನ ರೆಡ್ಡಿ ಸೇವೆ ಗುರುತಿಸಿ, ಸೋಮವಾರ ನಡೆಯುವ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಪ್ರೌಢಶಾಲಾ ಸಹಶಿಕ್ಷಕರ ವಿಭಾಗದ ಅಭ್ಯರ್ಥಿ ಬಿ.ಜನಾರ್ದನ ರೆಡ್ಡಿ ಅವರ ಸೇವೆ ಹೆಚ್ಚಿನ ರೀತಿಯಲ್ಲಿ ಪಡೆಯಲು ತಾಲೂಕಿನ ಎಲ್ಲಾ ಪ್ರೌಢಶಾಲಾ ಸಹಶಿಕ್ಷಕರು ತಮ್ಮ ಮತ ನೀಡಬೇಕು. ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಸಹಕಾರ ನೀಡಬೇಕು. ಹೆಚ್ಚಿನ ಮತ ನೀಡಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಇಂದು 'ಲೋಕಾ' ಅದಾಲತ್
ಟೇಕಲ್: ಟೇಕಲ್ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 10-30 ಗಂಟೆಗೆ ಹೋಬಳಿ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವಲ್ಲಿ ವಿಳಂಬ, ನಿರ್ಲಕ್ಷ್ಯ, ಹಣಕ್ಕಾಗಿ ಕಿರುಕುಳ ಪ್ರಕರಣಗಳಿದ್ದಲ್ಲಿ ಲಿಖಿತ ಅಹವಾಲು ಸ್ವೀಕರಿಸಲು ಕರ್ನಾಟಕ ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಅವರಿಂದ ಅದಾಲತ್ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಅರ್ಜಿ ಮೂಲಕ ತಮ್ಮ ಅಹವಾಲು ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.