ಬೇಡಿಕೆ ಈಡೇರಿಕೆಗೆ ಹೋರಾಟ
ಬಂಗಾರಪೇಟೆ: ಬಿಸಿಯೂಟದ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ವಿಫಲವಾದರೆ ಮುಂದಿನ ಅಕ್ಟೋಬರ್ ತಿಂಗಳಲ್ಲಿ ರಾಜ್ಯದಾದ್ಯಂತ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಬೀದಿಗಿಳಿದು ಹೋರಾಟ ಮಾಡುವುದಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾವತಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ಅಕ್ಷರ ದಾಸೋಹ ನೌಕರರ ತಾಲೂಕು ಮಟ್ಟದ ಮೂರನೇ ಸಮ್ಮೇಳನದ ಕಾರ್ಯಕ್ರಮವನ್ನು ಚಾಲನೆ ಮಾಡಿ ಮಾತನಾಡುತ್ತಾ, ಸಾವಿರಾರು ಕುಟುಂಬಗಳು ಬಿಸಿಯೂಟ ವೃತ್ತಿಯನ್ನು ನಂಬಿಕೊಂಡು ಜೀವಿಸುತ್ತಿದೆ. ಆದರೆ ಸರ್ಕಾರ ಈ ನೌಕರರಿಗೆ ಕನಿಷ್ಠ ವೇತನ ಸಹ ನೀಡದೆ ತಾರತಮ್ಯ ಅನುಸರಿಸುತ್ತಿದೆ ಈ ಬಗ್ಗೆ ಹಲವು ಬಾರಿ ನೌಕರರು ಪ್ರತಿಭಟನೆ ಮಾಡಿದರೂ ಸರ್ಕಾರಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಸರ್ಕಾರದ ಈ ನಿರ್ಲಕ್ಷ್ಯವನ್ನು ಕಟುವಾಗಿ ಖಂಡಿಸಿದರು. ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಿ ಅವರಲ್ಲಿ ಕಲಿಕಾ ಸಾರ್ಮಥ್ಯವನ್ನು ಹೆಚ್ಚಿಸಲು ಈ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಈ ಯೋಜನೆಯಡಿ ಕೆಸಲ ಮಾಡುತ್ತಿರುವ ಸಿಬ್ಬಂದಿಗೆ ಕೆಲಸದ ಭದ್ರತೆಯಿಲ್ಲ,ಕನಿಷ್ಟ ಕೂಲಿ ಇಲ್ಲ ಹೆರಿಗೆ ರಜೆ, ಭತ್ಯೆ ಸೇರಿದಂತೆ ಯಾವುದೇ ಸೌಲಭ್ಯವಿಲ್ಲ. ಯೋಜನೆ ಪ್ರಾರಂಭದಿಂದ ಇಂದಿನವರೆಗೂ ಸಂಘಟಿತರಾಗಿ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹೋರಾಟಕ್ಕೆ ತಕ್ಕ ಫಲ ಇನ್ನೂ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ ನೌಕರ ಸಂಘದ ಅಧ್ಯಕ್ಷೆ ಜಯಲಕ್ಷ್ಮಿಶ್ರೀನಿವಾಸ್ ಮಾತನಾಡಿ ನೌಕರರ ಕಷ್ಟಕಗಳಿಗೆ ಸ್ಪಂದಿಸುವ ಶಾಸಕರನ್ನು ವಿಧಾನಸಭೆಗೆ ಕಳುಹಿಸಿದರೆ ಮಾತ್ರ ಅಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದು ಆದ್ದರಿಂದ ಮುಂದಿನ ದಿನಗಳಲ್ಲಿ ಪುಡಿಕಾಸಿಗೆ ಮತಗಳನ್ನು ಮಾರಿಕೊಳ್ಳದೆ ಎಚ್ಚರದಿಂದ ಮತ ಹಾಕಬೇಕೆಂದು ತಿಳಿವಳಿಕೆ ನೀಡಿ ನೌಕರರ ಸಂಘಟನೆ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಲಿತಮ್ಮ, ಪಿ. ಶ್ರೀನಿವಾಸ್, ರವೀಂದ್ರ, ಸಿಐಟಿಯು ಕೋಲಾರ ಸಮಿತಿ ಸದಸ್ಯ ದಾಂಧಿನಗರ ನಾರಾಯಣಸ್ವಾಮಿ, ಅಪ್ಪಯ್ಯಣ್ಣ ಮತ್ತಿತರರು ಇದ್ದರು.