ಮಠದ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಜು. 21
ಅನುಮಾನದಿಂದ ದಾಖಲೆ ಪರಿಶೀಲಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಜಯನಗರದ ಅದಿಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿ ಖಂಡಿಸಿ, ಒಕ್ಕಲಿಗ ಸಂಘಟನೆ ಮುಖಂಡರು ಬೀದಿಗಿಳಿದು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಕೇಂದ್ರದ ವಿರುದ್ಧದ ಧಿಕ್ಕಾರ ಘೋಷಣೆಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಒಕ್ಕಲಿಗ ಸಂಘಟನೆ ಮುಖಂಡರು ರಾಜಕೀಯ ದುರುದ್ದೇಶದಿಂದ ಅದಿಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಧರಣಿ ಕುಳಿತು ಕೆಲ ಸಮಯ ರಸ್ತೆ ಸಂಚಾರವನ್ನು ತಡೆದರು. ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಕೆ.ಪಿ.ಬಚ್ಚೇಗೌಡ ಆಕ್ರೋಶ: ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಮಠದ ಮೇಲಿನ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಮಠದ ಸೇವೆಯನ್ನು ಗಣನೆಗೆ ತೆಗೆದುಕೊಳ್ಳದೇ ದಾಳಿ ನಡೆಸಿರುವ ಅಧಿಕಾರಿಗಳು ಕೂಡಲೇ ಕ್ಷಮೆಯಾಚಿಸಬೇಕು. ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ರೈತ ಮುಖಂಡ ಯಲುವಹಳ್ಳಿ ರಮೇಶ್ ಮತ್ತಿತರರು ಮಾತನಾಡಿದರು.
ಒಕ್ಕಲಿಗ ಮುಖಂಡರಾದ ಕೆ.ವಿ.ನಾಗರಾಜ್, ಡಾ. ಕೆ.ಪಿ. ಶ್ರೀನಿವಾಸಮೂರ್ತಿ, ಜಿ.ಆರ್. ನಾರಾಯಣಸ್ವಾಮಿ, ಎ.ವಿ. ಬೈರೇಗೌಡ, ಕೆ.ನಾರಾಯಣಪ್ಪ, ಎಂ.ಪ್ರಕಾಶ್, ಸಾಹಿತಿ ಗೋಪಾಲಗೌಡ, ಹೆಚ್.ವಿ.ಚಿಕ್ಕಗೆರಿಗರೆಡ್ಡಿ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.