ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರದ್ದು ಆತ್ಮಹತ್ಯೆಯಲ್ಲ, ಸರ್ಕಾರ ಮಾಡಿದ ಕೊಲೆ'

Rashmi Kasaragodu
Updated On : 22 Jul 2013, 1:19 am

ಕ.ಪ್ರ.ವಾರ್ತೆ   ಕೆಜಿಎಫ್   ಜು. 21
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 33ನೇ ರೈತ ಹುತಾತ್ಮಕ ದಿನಾಚರಣೆಯನ್ನು ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮದ ಪೊಲೀಸ್ ಠಾಣಾ ಮುಂಭಾಗದಲ್ಲಿ ರೈತ ಧ್ವಜಾರೋಹಣ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರ್ ಹರಿಕುಮಾರ್, ನರಗುಂದ- ನವಿಲಗುಂದದಲ್ಲಿ ರೈತ ಬಂಡಾಯ ನಡೆದು 33 ವರ್ಷಗಳಾಗಿವೆ. ಅಂದಿನ ಬಂಡಾಯ ಹತ್ತಿಕ್ಕಲು ಆಗಿನ ರಾಜ್ಯ ಸರ್ಕಾರ ರೈತರ ಮೇಲೆ ಗುಂಡು ಹಾರಿಸಿ, ರೈತರನ್ನು ಬಲಿ ತೆಗೆದುಕೊಂಡಿತು. ಒಟ್ಟಾರೆ ಸರ್ಕಾರದ ದೌರ್ಜನ್ಯ ಮತ್ತು ಗುಂಡೇಟಿಗೆ 143 ಮಂದಿ ರೈತರು ಬಲಿಯಾಗಿದ್ದಾರೆ ಎಂದರು.
ರೈತ ಸಂಘ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದೆ.  ಹೊಸ ಆರ್ಥಿಕ ನೀತಿ, ಉದಾರೀಕರಣ ನೀತಿ ಜಾರಿಗೆ ಬಂದ ನಂತರ ಈವರೆಗೆ ರಾಜ್ಯದಲ್ಲಿ 56 ಸಾವಿರ ರೈತರು ಹಾಗೂ ದೇಶದಲ್ಲಿ 7 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆತ್ಮಹತ್ಯೆಯಲ್ಲ ಸರ್ಕಾರದ ತನ್ನ ರೈತ ನಿರೋಧಿ ನೀತಿಯಿಂದಾಗಿ ಅನ್ನದಾತರನ್ನು ಕೊಲೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು ಎಂದರು.
ಇಂದು ರೈತರು ತಮ್ಮ ಕುಲ ಕಸುಬು ವ್ಯವಸಾಯದಿಂದ ದೂರ ಹೋಗುತ್ತಿದ್ದಾರೆ. ನಮ್ಮ ಯುವಕರು ಬದುಕಿನ ಅತಂತ್ರದಿಂದಾಗಿ ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳು, ಗ್ರಾಮಗಳು ಸ್ಮಶಾನ ಮೌನ ಆವರಿಸಿದೆ. ಒಟ್ಟಾರೆ ರೈತ ತನ್ನ ಸಂಸ್ಕೃತಿ ಮತ್ತು ಸ್ವಾಭಿಮಾನ ಕಳೆದುಕೊಂಡಿದ್ದು ಕೃಷಿ ಭೂಮಿ ಬಂಡವಾಳಗಾರರ ಪಾಲಾಗುತ್ತಿದೆ. ಪರರ ಮುಂದೆ ಕೈಚಾಚದೆ ಬದುಕುತ್ತಿದ್ದ ಅನ್ನದಾತರು ಭಿಕ್ಷುಕರಾಗುತ್ತಿದ್ದಾರೆ ಎಂದು ರೈತರ ನೋವುಗಳ ಬಗ್ಗೆ ತಿಳಿಸಿದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, 50 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿ ರೈತ ಸಂಘ ಇಲ್ಲದ ಕಾರಣ ರೈತರ ಸಂಕಷ್ಟಗಳ ಬಗ್ಗೆ  ಹಾಗೂ ಅವರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು.  ಆದರೆ, ಈಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಗಳು ಸ್ಥಾಪನೆಯಾಗಿದೆ. ರೈತರ ಪರ ಬಲಿಷ್ಠವಾಗಿ ದನಿಯೆತ್ತಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ರೈತರ ಪ್ರಮುಖ ಬೇಡಿಕೆಗಳಾದ ಸರ್ಕಾರ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ಎಲ್ಲಾ ರೀತಿಯ ಸಾಲ ಸೌಲಭ್ಯ ನೀಡಬೇಕು. ಮುಖ್ಯವಾಗಿ ಕುರಿ ಸಾಕಣೆ, ಎತ್ತಿನ ಗಾಡಿ ಸಾಲಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ರೈತರು ಮತ್ತು ಕೃಷಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಮುಂದಾಲೋಚನಾ ಕ್ರಮ ಜಾರಿಗೊಳಿಸಬೇಕು. ಬರಗಾಲ ನಿರ್ಮೂಲನೆಗಾಗಿ ವ್ಯಾಟ್ ರೀತಿ ತೆರಿಗೆ ಹಾಕಿ ಕನಿಷ್ಠ ಪಕ್ಷ 15 ಸಾವಿರ ಕೋಟಿ ಬರಗಾಲ ನಿಧಿಗೆ ಕಾಯ್ದಿರಿಸಬೇಕು. ಬಯಲು ಸೀಮೆ ಜಿಲ್ಲೆಗಳ ನೀರಾವರಿ ಕ್ಷೇತ್ರಕ್ಕೆ ಪ್ರತಿ ವರ್ಷ ಬಜೆಟ್ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟು ಸಮುದ್ರಕ್ಕೆ ಹರಿದು ಹೋಗುವ ನೇತ್ರಾವತಿ ನೀರನ್ನು ಮತ್ತು ಕೃಷ್ಣ 'ಬಿ' ಸ್ಕೀಂನಲ್ಲಿ ದೊರೆಯುವ ಬಯಲುಸೀಮೆ ಜಿಲ್ಲೆಯ ನೀರನ್ನು ಸಮರ್ಪಕವಾಗಿ ಬಳಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ದುಪ್ಪಟ ದರ ಏರಿಕೆ ಮತ್ತು ಖಾಸಗಿ ಕಂಪನಿಗಳ ನಕಲಿ ಕೀಟನಾಶಕ ಮತ್ತು ಬಿತ್ತನೆ ಬೀಜಗಳಿಗೆ ಕಡಿವಾಣ ಹಾಕಿ, ಅವನ್ನು ಪೂರೈಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಈ ನಿಟ್ಟಿನಲ್ಲಿ ಒತ್ತಾಯಿಸಲು ಬೃಹತ್ ರೈತ ಸಮಾವೇಶ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ರೈತ ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ಹುಲ್ಕೂರು ಗೋಪಾಲ್, ಸಿದ್ದಗೌಡ, ವೆಂಕಟರಾಮರೆಡ್ಡಿ, ರವಿಬಾಬು, ಶಂಕರ, ರಘುಪತಿ, ಕೆ.ಎಂ. ಮುನಿವೆಂಕಟೇಶ್, ಮಂಜು, ದೊಡ್ಡಕಾರಿ ವಿಶ್ವನಾಥ್ ಸೇರಿದಂತೆ ಇತರೆ ರೈತ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement