ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆದಿವಾಸಿಗಳ ಒಕ್ಕಲೆಬ್ಬಿಸಬೇಡಿ

Vishwanath S
Updated On : 24 Jul 2013, 12:35 pm

ಕ.ಪ್ರ.ವಾರ್ತೆ ,  ಕೋಲಾರ ,  ಜು.23
ಅರಣ್ಯ ಇಲಾಖೆಯು ಬಡ ಭೂರಹಿತರು, ದಲಿತರು ಹಾಗೂ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ತಕ್ಷಣ ನಿಲ್ಲಿಸಬೇಕು ಮತ್ತು ಜೀವನಾಧಾರವಾದ ತುಂಡು ಭೂಮಿ ಬಡವರಿಗೆ ದಕ್ಕಬೇಕು ಎಂದು ಆಗ್ರಹಿಸಿ ದಲಿತ, ಆದಿವಾಸಿಗಳ ಭೂಮಿಯ ಹಕ್ಕಿಗಾಗಿ ಆಂದೋಲನ ಕರ್ನಾಟಕದಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಖರಾಬು ಭೂಮಿಯಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಲಕ್ಷಾಂತರ ದಲಿತರು, ಆದಿವಾಸಿ ಬಡ ರೈತರನ್ನು ಅರಣ್ಯ ಇಲಾಖೆಯವರು ಹಾಲಿ ಅನುಭವದಲ್ಲಿರುವ ಭೂಮಿಯು ಕಂದಾಯ ಭೂಮಿ ಎಂದು ಪರಿಗಣಿಸಿ ಒಕ್ಕಲೆಬ್ಬಿಸುವುದಕ್ಕೆ ಮುಂದಾಗಿರುವುದಲ್ಲದೆ ಬಡವರನ್ನು  ನಿರಂತರವಾಗಿ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಲ್ಯಾಂಡ್ ಬ್ಯಾಂಕಿನಲ್ಲಿರುವ 18 ಲಕ್ಷ ಎಕರೆ ಸಿ ಮತ್ತು ಡಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಪುನಃ ವಾಪಸ್ ಪಡೆದುಕೊಳ್ಳುವ ಬದಲು ಬಡವರಿಗೆ ಭೂಮಿ ಇಲ್ಲದಂತೆ ಮಾಡುವುದು ಸರಿಯಲ್ಲವೆಂದು ಮುಖಂಡರು ತಿಳಿಸಿದರು.
ರಾಜ್ಯದ ಎಲ್ಲ ತಾಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿಗಳನ್ನು ಕೂಡಲೇ ರಚಿಸಿ ಭೂ ಮಂಜೂರಾತಿ ಪ್ರಕ್ರಿಯೆಯನ್ನು ಜಾರಿಗೆ ತರಬೇಕು. ಡಾ.ವಿ. ಸುಬ್ರಮಣ್ಯಂ ಸಮಿತಿ ಶಿಫಾರಸ್ಸಿನಂತೆ ರಾಜ್ಯದಲ್ಲಿ ಆಕ್ರಮವಾಗಿ ಒತ್ತುವರಿಯಾಗಿ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಂಗಾರಪೇಟೆಯ ಬಲಮಂದೆ ಗ್ರಾಮದ ಸರ್ವೆ ನಂ.157ರಲ್ಲಿ ಬೆಂಗಳೂರಿನ ಬಾಲಾಜಿ ನಾಯ್ಡು ಎಂಬವರು 100 ಎಕರೆಯಷ್ಟು ಒತ್ತುವರಿ ಮಾಡಿ ಬೇಲಿ ನಿರ್ಮಿಸಿದ್ದು, ಒತ್ತುವರಿ ತೆರವುಗೊಳಿಸಿ ಆರೋಪಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ದಲಿತ, ಆದಿವಾಸಿಗಳ ಭೂಮಿಯ ಹಕ್ಕಿಗಾಗಿ ಆಂದೋಲನ ಕರ್ನಾಟಕದ ಮುಖಂಡರಾದ ಐಪಲ್ಲಿ ನಾರಾಯಣಸ್ವಾಮಿ, ಹೂವರಸಹಳ್ಳಿ ರಾಜಪ್ಪ, ಹಾರೋಹಳ್ಳಿ ರವಿ, ಸಿ.ವಿ. ನಾಗರಾಜ್, ನಾರಾಯಣಸ್ವಾಮಿ, ಸಿ.ಜೆ. ನಾಗರಾಜ್, ರಾಮಪ್ಪ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement