ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉದ್ಘಾಟನೆಯಾಗದ ಮಾಲೂರು ಅಗ್ನಿಶಾಮಕ ಠಾಣೆ ಕಟ್ಟಡ

Vishwanath S
Updated On : 24 Jul 2013, 12:39 pm

ಕ.ಪ್ರ.ವಾರ್ತೆ ,  ಮಾಲೂರು ,  ಜು. 23
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷತನ ಹೇಗೆ ಸರ್ಕಾರದ ಯೋಜನೆ-ಸೌಲಭ್ಯಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಹಾಳಾಗುತ್ತಿವೆ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದೆ ಮಾಲೂರಿನ ನೂತನ ಅಗ್ನಿಶಾಮಕ ಠಾಣೆ.
3 ವರ್ಷದಿಂದ ಕುಂಟುತ್ತ ಸಾಗಿರುವ ಠಾಣೆಯ ಕಾಮಗಾರಿ ಈಗ ಒಂದು ಹಂತಕ್ಕೆ ಬಂದಿದೆ. ಆದರೆ, ಮೂಲ ಸೌಕರ್ಯಗಳಿಲ್ಲದೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯವಿಲ್ಲವಾಗಿದೆ. ಪರಿಣಾಮ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. 500ಕ್ಕೂ ಹೆಚ್ಚು ಹೆಂಚು, ಇಟ್ಟಿಗೆ ಕಾರ್ಖಾನೆ ಹೊಂದಿರುವ ಮಾಲೂರು ತಾಲೂಕಿನಲ್ಲಿ ನೂರಾರು ಕೋಳಿ ಫಾರಂ ಹಾಗೂ ಕೈಗಾರಿಕೆ ಪ್ರಾಂಗಾಣದಲ್ಲಿ 150ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಬೆಂಕಿ ಅಪಘಾತ ಘಟಿಸಿದರೂ ಕೋಲಾರದಿಂದ ಅಗ್ನಿಶಾಮಕ ಟ್ಯಾಂಕರ್ ಬರಬೇಕಾಗಿದೆ. ಇದರಿಂದ ಆಗುತ್ತಿದ್ದ ಹೆಚ್ಚಿನ ಅನಾಹುತ ತಪ್ಪಿಸಲು 2008-09ರಲ್ಲಿ ಅಂದಿನ ಶಾಸಕ ಕೃಷ್ಣಯ್ಯ ಶೆಟ್ಟಿ ಅವರು ರೇಲ್ವೆ ನಿಲ್ದಾಣ ರಸ್ತೆಯ ಸ.ನಂ. 163ರಲ್ಲಿ 28 ಗುಂಟೆ ಜಮೀನನ್ನು ಅಗ್ನಿಶಾಮಕ ಠಾಣೆಗಾಗಿ ಗುರ್ತಿಸಿದ್ದರು. ಇದಕ್ಕಾಗಿ ಸರ್ಕಾರದಿಂದ 40 ಲಕ್ಷ ವೆಚ್ಚದ ಕಾಮಗಾರಿಗೆ ಮಂಜೂರು ಮಾಡಿಸಿದ್ದರು. ತಾಂತ್ರಿಕ ತೊಂದರೆಗಳಿಂದ ಕಳೆದ 3 ವರ್ಷದ ಹಿಂದೆ 33 ಲಕ್ಷ ಟೆಂಡರ್ ಆಡಿಯಲ್ಲಿ ಪ್ರಾರಂಭವಾದ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿತ್ತು. ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಅಗ್ನಿಶಾಮಕ ಠಾಣೆ ಪ್ರಾರಂಭಿಸಲು ಮೂಲಭೂತವಾಗಿ ಬೇಕಾಗಿದ್ದ ನೀರು-ಸಂಪು ಇಲ್ಲದೆ ಠಾಣೆ ಉದ್ಘಾಟನೆ ವಿಳಂಬವಾಗುತ್ತಿದೆ. ಈಗ 33 ಲಕ್ಷ ವೆಚ್ಚದಲ್ಲಿ 2 ವಾಹನ ನಿಲ್ಲುವ ಶೆಡ್ ಸೇರಿದಂತೆ ಕಚೇರಿ ಕಟ್ಟಡ ನಿರ್ಮಾಣವಾಗಿದೆ. ಆದರೆ, ಕಾಂಪೌಂಡ್ ಇಲ್ಲದೆ ದಾರಿಹೋಕರ ಮನೆಯಂತಾಗಿದೆ.
ಅಗ್ನಿಶಾಮಕ ಠಾಣೆಗೆ 28 ಗುಂಟೆ ಮಂಜೂರಾಗಿದ್ದರೂ 25 ಗುಂಟೆ ಮಾತ್ರ ಕಾಣ ಸಿಗುತ್ತಿದೆ. ಇನ್ನೂ 3 ಗುಂಟೆ ಜಾಗ ಒತ್ತುವರಿಯಾಗಿದೆ. ಈ ವಿಷಯ ತಿಳಿಸಿರುವ ಇಲಾಖೆ ಅಧಿಕಾರಿಗಳು ಠಾಣೆ ಜಾಗ ಗುರ್ತಿಸಿ ದುರಸ್ತಿ ಮಾಡಿಕೊಡುವಂತೆ 2 ವರ್ಷದ ಹಿಂದೆಯೇ ತಹಸೀಲ್ದಾರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಿಲ್ಲವಾಗದೆ. ಈ ಹಿನ್ನೆಲೆಯಲ್ಲಿ ಮತ್ತೆ 3 ತಿಂಗಳ ಹಿಂದೆ ತಹಸೀಲ್ದಾರ್ ಅವರಿಗೆ ಮತ್ತೆ ಮನವಿ ಸಲ್ಲಿಸಲಾಗಿದೆ. ಆದರೂ ಸರ್ವೆ ಕಾರ್ಯ ನಡೆದಿಲ್ಲ. ಠಾಣೆ ನಿರ್ಮಾಣಕ್ಕೆ 40 ಲಕ್ಷ ಮಂಜೂರಾಗಿದ್ದರೂ 33 ಲಕ್ಷಗಳ ಟೆಂಡರ್ ಕರೆದು ಕಾಮಗಾರಿ ಮಾತ್ರ ನಡೆದಿದೆ. ಇನ್ನುಳಿದ 7 ಲಕ್ಷಗಳಲ್ಲಿ ಕೊಳವೆಬಾವಿ, ನೀರಿನ ತೊಟ್ಟಿ, ಕಾಂಪೌಂಡ್ ಹಾಗೂ ಠಾಣೆ ಮುಂಭಾಗದ ಚರಂಡಿಗೆ ಡೆಸ್ಕ್‌ಸ್ಲ್ಯಾಬ್  ನಿರ್ಮಿಸಬೇಕಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಮಾತನಾಡಿದರೂ ಲೋಕೋಪಯೋಗಿ ಇಲಾಖೆಯ ಎಇಇ ಆನಂದ್ ಟೆಂಡರ್‌ನಂತೆ ಕಾಮಗಾರಿ ಪೂರ್ಣಗೊಳಿಸಿಕೊಡಲಾಗಿದೆ. ಟೆಂಡರ್‌ನಲ್ಲಿ ಕೊಳವೆಬಾವಿ, ಸಂಪುಗಳನ್ನು ನಮೂದಿಸದ ಕಾರಣ ಅವುಗಳನ್ನು ನಿರ್ಮಿಸಲಾಗಿಲ್ಲ. ಈ ಬಗ್ಗೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳೊಡನೆ ಚರ್ಚಿಸಲಾಗಿದೆ. ಅವರ ಅವಶ್ಯಕತೆಯಂತೆ ಅಗ್ನಿಶಾಮಕ ಠಾಣೆಗೆ ಕಾಂಪೌಂಡ್, 1 ಲಕ್ಷ ಲೀ. ಸಾಮರ್ಥ್ಯದ ಸಂಪು, ವಿದ್ಯುತ್ ಸೌಲಭ್ಯ ಸೇರಿದಂತೆ ಇತರೆ ಕಾರ್ಯಗಳಿಗಾಗಿ 30 ಲಕ್ಷ ಯೋಜನೆ ತಯಾರಿಸಿ ಅಗ್ನಿಶಾಮಕ ಇಲಾಖೆಗೆ ನೀಡಲಾಗಿದೆ. ಅವರಿಂದ ಇದುವರೆಗೂ ಸಕಾರಾತ್ಮಕ ಉತ್ತರ ಬಂದಿಲ್ಲ. ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದರೆ ಮಾತ್ರ ಇಲ್ಲಿ ಕಾಮಗಾರಿ ಮುಂದುವರೆಸಲು ಸಾಧ್ಯ ಎನ್ನಲಾಗಿದೆ.
ಮಂಜೂರಾತಿಯಲ್ಲಿ ಉಳಿದಿರುವ ಮೊತ್ತ ಸಾಕಾಗದ ಕಾರಣ ಅಗ್ನಿಶಾಮಕ ಠಾಣೆ ಅಧಿಕಾರಿ, ಸಿಬ್ಬಂದಿ ವಸತಿ ಗೃಹಗಳು ಸೇರಿ ಉಳಿದ ಮೂಲ ಸೌಕರ್ಯಗಳಿಗಾಗಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಪಡೆಯಲು ಅಗ್ನಿ ಶಾಮಕ ಇಲಾಖೆಯವರು, ಹಾಲಿ ಶಾಸಕರ ಗಮನಕ್ಕೆ ತಂದು ಅವರ ಸಹಕಾರದಲ್ಲಿ ಯತ್ನಿಸಬೇಕಾಗಿದೆ. ಪ್ರತಿ ವರ್ಷ ತಾಲೂಕಿನಲ್ಲಿ 50ಕ್ಕೂ ಹೆಚ್ಚು ಬೆಂಕಿ ಅಪಘಾತಗಳು ನಡೆಯುತ್ತವೆ. ಈ ಹಿನ್ನೆಲೆ ಶಾಸಕರು ಸಹ ಈ ಕಡೆ ಗಮನಹರಿಸಿ ಶೀಘ್ರ ಅಗ್ನಿಶಾಮಕ ಠಾಣೆ ಸೇವೆ ತಾಲೂಕಿಗೆ ಸಿಗುವಂತೆ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

-ರಾಜೇಂದ್ರ ವೈದ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement