'ಕೊಳವೆಬಾವಿ ಕೊರೆಸಿ ನೀರಿನ ಬವಣೆಗೆ ಪರಿಹಾರ'
ಗೌರಿಬಿದನೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿನ ಜನತೆ ಅನುಭವಿಸುತ್ತಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹರಿಸಲು ಅವಶ್ಯವಿರುವೆಡೆ ಕೊಳವೆಬಾವಿಗಳನ್ನು ಕೊರೆಯಿಸಲಾಗುವುದು. ಇದಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದು ನೂತನ ವಿಧಾನಸಭಾ ಉಪಸಭಾಪತಿ ಹಾಗೂ ಸ್ಥಳೀಯ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ತಾಲೂಕಿನ ಹಳೇ ಉಪ್ಪಾರಹಳ್ಳಿಯಲ್ಲಿ ಇತ್ತೀಚೆಗೆ ಕೊರೆಯಿಸಿದ ಕೊಳವೆಬಾವಿ ಯೋಜನೆ ಜನತೆಗೆ ಸಮರ್ಪಿಸಿ ಅವರು ಮಾತನಾಡಿದರು. ನನ್ನನ್ನು 4 ಬಾರಿ ಶಾಸಕನಾಗಿ ಆಯ್ಕೆ ಮಾಡಿರುವ ಈ ಕ್ಷೇತ್ರದ ಋಣ ತೀರಿಸಲು ನನಗಿದೊಂದು ಸದವಕಾಶವಾಗಿದೆ ಎಂದರು. ಮುಖಂಡರಾದ ಜಿ.ಕೆ.ಸತೀಶ್, ಪ್ರಕಾಶ್ ರೆಡ್ಡಿ, ವೇದಲವೇಣಿ ವೇಣು, ಬೊಮ್ಮೊಣ್ಣ, ಗುಡಿ ಅಶ್ವತ್ಥಪ್ಪ, ಹಾಗೂ ಗ್ರಾಮಸ್ಥರು ಹಾಜರಿದ್ದರು.