ದೊಡ್ಡಕೆರೆಗೆ ಒತ್ತುವರಿ ಭೀತಿ: ತಾಲೂಕು ಆಡಳಿತ ಮೌನ!
ಬಂಗಾರಪೇಟೆ: ಪಟ್ಟಣದ ಜನರಿಗೆ ಸದಾ ಕುಡಿಯುವ ನೀರಿನ ಆಶ್ರಯ ತಾಣವಾಗಿದ್ದ ದೊಡ್ಡಕೆರೆ ಮಳೆಯಿಲ್ಲದೆ ಸಂಪೂರ್ಣವಾಗಿ ಒಣಗಿರುವುದರಿಂದ ಭೂ ಮಾಫಿಯಾದವರು ಕೆರೆ ಅಂಗಳ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದೊಡ್ಡಕೆರೆ ಈಗ ಸಣ್ಣ ಕೆರೆಯಾಗಿದೆ. ಆದರೆ, ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಒತ್ತುವರಿದಾರರಿಗೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.
ಒಂದು ಕಾಲದಲ್ಲಿ ಪಟ್ಟಣ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ದೊಡ್ಡಕೆರೆ ಸತತ ಬರಗಾಲಕ್ಕೆ ಕ್ಷೇತ್ರ ಸಿಲುಕಿದೆ. ಇದರಿಂದ ಸಕಾಲಕ್ಕೆ ಮಳೆಯಾಗದೆ ಕೆರೆ ಈಗ ಅಕ್ಷರಶಃ ಬೆಂಗಾಡಾಗಿದೆ. ಮಳೆರಾಯನನ್ನು ಒಲಿಸಿಕೊಳ್ಳಲು ನಾಗರಿಕರು ಪ್ರತಿವರ್ಷ ಗಂಗಾದೇವಿಗೆ ಪೂಜೆ ಸಲ್ಲಿಸಿದರೂ ಮಳೆರಾಯ ಮಾತ್ರ ಇತ್ತ ಮುಖ ಹಾಕಿಲ್ಲ. ಈ ಅವಕಾಶ ಬಳಸಿರುವ ಕೆಲ ಪ್ರಭಾವಿ ಮುಖಂಡರು ಹಾಗೂ ಭೂ ಮಾಫಿಯಾದವರು ದಿನೇ ದಿನೇ ಕೆರೆಯ ಸುತ್ತಮುತ್ತಲಿನ ಪ್ರದೇಶ ಒತ್ತುವರಿ ಮಾಡುತ್ತಿದ್ದಾರೆ. ಇದರಿಂದ ದೊಡ್ಡ ಕೆರೆ ಈಗ ಸಣ್ಣ ಕೆರೆಯಾಗುತ್ತಿದೆ. ಪೂರ್ವಿಕರು ಬರಗಾಲದಲ್ಲಿ ಜನರಿಗೆ ಅನುಕೂಲವಾಗಲೆಂದು ಮುಂದಾಲೋಚನೆಯಿಂದ ಕೆರೆಗಳನ್ನು ಕಟ್ಟಿದರು. ಆದರೆ, ಇಂದು ಕೆರೆಗಳು ಮಾಯವಾಗುತ್ತಿವೆ.
ದೊಡ್ಡಕೆರೆ ಉಳಿಸುವ ಸಲುವಾಗಿ ವಿಧಾನಪರಿಷತ್ ಸದಸ್ಯೆ ಪ್ರೊ. ಲೀಲಾವತಿ ಅವರು ಪರಿಷತ್ನಲ್ಲಿ ದನಿಎತ್ತಿ ಉಳಿಸಲು ಹೋರಾಟ ಮಾಡಿದ ಪರಿಣಾಮ ಹಿಂದಿನ ಬಿಜೆಪಿ ಸರ್ಕಾರ ಕೆರೆ ಸರ್ವೆಗೆ ಚಾಲನೆ ನೀಡಿತ್ತು. ಒಂದಲ್ಲಾ 3 ಬಾರಿ ಸರ್ವೆ ಮಾಡಿದರೂ ಗಡಿ ಗುರ್ತಿಸುವ ಕೆಲಸ ಮಾತ್ರವಾಗಿಲ್ಲ. ತಹಸೀಲ್ದಾರ್ ಮಂಗಳಾರವರ ಅವಧಿಯಲ್ಲಿ ಒತ್ತುವರಿ ಗುರ್ತಿಸಿ ಇನ್ನೇನು ತೆರವು ಕಾರ್ಯ ಶುರುವಾಗಲಿದೆ ಎಂದು ನಾಗರಿಕರು ನಿಟ್ಟುಸಿರು ಬಿಡುವ ಸಂಭ್ರಮದಲ್ಲಿದ್ದರು. ಆದರೆ, ಆ ಹೊತ್ತಿಗೆ ಮತ್ತೆ ಗಂಡಾಂತರ ಆವರಿಸಿತು. ಈ ಕಾರ್ಯಕ್ಕೆ ಜನಪ್ರತಿನಿಧಿಗಳೇ ಅಡ್ಡಗಾಲು ಹಾಕಿದ್ದರಿಂದ ಸರ್ವೆ ಮತ್ತು ಒತ್ತುವರಿ ತೆರವುಗೊಳಿಸುವ ಕೆಲಸ ಸ್ಥಗಿತಗೊಂಡಿದೆ. ಈ ಮಧ್ಯೆ ಕೆರೆ ಉಳಿಸುವ ಸಲುವಾಗಿ ಕೆರೆ ಸುತ್ತಲೂ ಹಿರಿಯ ನಾಗರಿಕರಿಗಾಗಿ ವಾಕಿಂಗ್ ಝೋನ್ ನಿರ್ಮಾಣಕ್ಕೆ ಅಂದಿನ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ ಮತ್ತು ಪುರಸಭೆ ಆಸಕ್ತಿ ತೋರಿ ಕೆರೆ ಸುತ್ತಲೂ ಮಣ್ಣನ್ನು ಅಳವಡಿಸಿತ್ತು. ವರ್ಷವಾದರೂ ಯಾವುದೂ ಪೂರ್ಣಗೊಂಡಿಲ್ಲ. ಎಲ್ಲಾ ಅರ್ಧಕ್ಕೆ ನಿಂತಿದೆ. ಅತ್ತ ಕೆರೆ ಒತ್ತುವರಿಯನ್ನೂ ತೆರವುಗೊಳಿಸಿಲ್ಲ. ಇತ್ತ ವಾಕಿಂಗ್ ಝೋನ್ ಸಹ ನಿರ್ಮಾಣವಾಗಿಲ್ಲ. ನಿರ್ಲಕ್ಷ್ಯತನದಿಂದಾಗಿ ಕೆರೆ ಈಗ ತ್ಯಾಜ್ಯ ವಸ್ತುಗಳ ಗೂಡಾಗಿದೆ. ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲದ ಕಾರಣ ಕೆರೆಯೆ ಇಲ್ಲಿನ ಜನರ ಜೀವಾಳವಾಗಿದೆ. ಯಾವುದೇ ಸರ್ಕಾರಗಳು ಬಂದರೂ ಅಂತರ್ಜಲಮಟ್ಟ ಹೆಚ್ಚಿಸಲು ಕೆರೆಗಳನ್ನು ಉಳಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಗೆ ಅಷ್ಟು ಕೋಟಿ, ಇಷ್ಟು ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಬಿಟ್ಟಿ ಪ್ರಚಾರ ಪಡೆಯುವರೇ ವಿನಃ ಇದುವರೆಗೂ ಕ್ಷೇತ್ರದ ಯಾವುದೇ ಕೆರೆ ಅಭಿವೃದ್ಧಿಗೊಳಿಸಿದ ಉದಾಹರಣೆ ಇಲ್ಲ. ಹಾಗಿದ್ದರೆ ಕೋಟಿಗಟ್ಟಲೆ ಹಣ ಎಲ್ಲಿ? ಏನಾಗಿದೆ? ಎಂಬುದು ಮಾತ್ರ ನಿಗೂಡವಾಗಿಯೇ ಉಳಿದಿದೆ. ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಎನ್. ನಾರಾಯಣಸ್ವಾಮಿ ಕ್ಷೇತ್ರ ಪ್ರಗತಿಗೆ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇವರಾದರೂ ಪಟ್ಟಣದ ಕೆರೆ ಸೇರಿದಂತೆ ಕ್ಷೇತ್ರದಲ್ಲಿರುವ ಪ್ರಮುಖ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವರೆ ಎಂದು ಆಸೆ ಕಣ್ಣಿನಿಂದ ಎದುರು ನೋಡುತ್ತಿದ್ದಾರೆ.
- ಕೆ. ರಮೇಶ್