ನೀರಿನ ಸಮಸ್ಯೆಯೇ ಹೊಸ ಡಿಸಿಗೆ ದೊಡ್ಡ ಸವಾಲು
ಕೋಲಾರ: ಜಿಲ್ಲೆಗೆ ವರ್ಷದಲ್ಲಿ 50 ದಿನ ಮಾತ್ರ ಮಳೆಯ ಭಾಗ್ಯವಿದ್ದರೂ ಪ್ರಕೃತಿಯ ವೈಪರಿತ್ಯದಿಂದ ಸಕಾಲಕ್ಕೆ ಮಳೆ ಬಾರದೆ ಜನ ಮತ್ತು ಜಾನುವಾರುಗಳ ಪರಿಸ್ಥಿತಿ ಶೋಚನೀಯವಾಗಿದೆ.
ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ವಾರ್ಷಿಕ 724 ಮಿ.ಮಿ ವಾಡಿಕೆ ಮಳೆಯಾಗಬೇಕಾಗಿದ್ದು 2001ರಿಂದ 2012ರವರೆಗಿನ ಮಾಹಿತಿ ಗಮನಿಸಿದರೆ ಕೆಲವು ವರ್ಷ ವಾಡಿಕೆ ಮಳೆಗಿಂತ ಹೆಚ್ಚಾಗಿ ಮಳೆಯಾಗಿದ್ದರೆ, ಇನ್ನುಳಿದ ವರ್ಷಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿರುವುದುಂಟು.
ಜತೆಗೆ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿಗೆ ಈವರೆಗೆ ಯಾವುದೇ ಪರಿಣಾಮಕಾರಿ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಎಸ್.ಎಂ. ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ವಿಶ್ವ ಬ್ಯಾಂಕಿನ ನೆರವಿನಿಂದ ಅಖಂಡ ಕೋಲಾರ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ನೀಡಲಾಗಿದ್ದ ಕೋಟ್ಯಂತರ ರುಪಾಯಿ ಸದ್ಬಳಕೆಯಾಗಿದ್ದಲ್ಲಿ ಮಳೆಯ ನೀರು ಭೂತಾಯಿಯ ದಾಹ ತೀರಿಸುವ ಮೂಲಕ ಈ ನೆಲದ ಮಕ್ಕಳ ರಕ್ಷಣೆಗೂ ಅನುಕೂವಾಗುತ್ತಿತ್ತು.
ರಾಜಕೀಯ ಇಚ್ಛಾಶಕ್ತಿಯ ಕೊರತೆ, ಪೂರ್ವಿಕರು ಕಟ್ಟಿಸಿದ ಕೆರೆಗಳ ರಕ್ಷಣೆ, ಕಲ್ಯಾಣಿಗಳ ಪುನಶ್ಚೇತನಕ್ಕೆ ಕಾಳಜಿ ತೋರದಿರುವುದರಿಂದ ಇಂದು ನೂರಾರು ಜಲ ನಿಧಿಗಳು ಭೂಗಳ್ಳರ ಪಾಲಾಗಿದೆ, ಮರಳು ಮಾಫಿಯಾಗಳಿಂದ ಬರಡಾಗಿದೆ.
ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಬಂದವರ ಪೈಕಿ ಲಕ್ಷ್ಮಣರಾವ್ ಅವರ ಗಡಸುತನದ ಆಡಳಿತ, ಶಿವಾನಂದ ಮತ್ತು ತಿಮ್ಮೇಗೌಡರು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದು, ಪಿ.ಎಸ್.ಎಸ್. ರಾವ್ ಮತ್ತು ರಾಮಪ್ರಸಾದ್ ಅವರು ಜನ ಸಾಮಾನ್ಯರ ಕಷ್ಟ-ಸುಖ-ಗಳಿಗೆ ತೋರುತ್ತಿದ್ದ ಸ್ಪಂದನೆ, ಸಂಜಯ್‌ದಾಸ್ ಗುಪ್ತ ಅವರು ರೈತರ ಪರವಾಗಿ ಕೈಗೊಳ್ಳುತ್ತಿದ್ದ ದಿಟ್ಟ ನಿರ್ಧಾರ ಹಾಗೂ ಕಳೆದ ವರ್ಷ ಜಿಲ್ಲೆಗೆ ಬಂದು ಮಾದ್ಯಮಗಳ ನೀಡಿದ ಸಲಹೆಯನ್ನು ರಚನಾತ್ಮಕವಾಗಿ ಪರಿಗಣಿಸಿ 102ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಿದ ಡಾ.ಡಿ.ಎಸ್. ವಿಶ್ವನಾಥ್ ಅವರನ್ನು ಜನತೆ ಎಂದೂ ಮರೆಯಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ಅತಿ ಹೆಚ್ಚು ದಲಿತರು, ಹಿಂದುಳಿದ ವರ್ಗದವರು ಇದ್ದಾರೆ, ಯಾವುದೇ ವರ್ಗಕ್ಕೆ ಸೇರಿದವರಾಗಿದ್ದರೂ ದೈನಂದಿನ ಬದುಕಿಗೆ ನೀರು ಅವಶ್ಯಕ, ಕಳೆದ 15 ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ನೂರಾರು ಹೋರಾಟಗಳು ನಡೆದಿದೆ.
ಸರ್ಕಾರಗಳು ಜನತೆಯ ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟಿಲ್ಲ, ಚುನಾವಣೆಗಳ ಸಂದರ್ಭದಲ್ಲಂತೂ ಶಾಶ್ವತ ನೀರಾವರಿಯ ವಿಚಾರ ಜನತೆಯ ವರಿಯನ್ನು ಹೆಚ್ಚಿಸುವಷ್ಟರ ಮಟ್ಟಿಗೆ ಪ್ರಚೂರ ಪಡೆದಿದೆ.
ಹತ್ತಾರು ವರ್ಷಗಳ ಹೋರಾಟದ ಫಲವಾಗಿ ಈಗ ಡಾ. ಪಮಶಿವಯ್ಯನವರ ವರದಿಯ ಬಗ್ಗೆ ಸರ್ಕಾರ ಕೊಂಚ ಮಟ್ಟಿಗೆ ಆಸಕ್ತಿ ತೋರಿದೆ. ಜತೆಗೆ ಪರಮಶಿವಯ್ಯ ವರದಿಗೆ ಮುನ್ನ ಎತ್ತಿನಹೊಳೆ ಯೋಜನೆಯ ಮೂಲಕ ಆನೆ ಹೊಟ್ಟಗೆ ಅರೆಕಾಸು ಮಜ್ಜಿಗೆ ಎಂಬಂತೆ 24 ಟಿಎಂಸಿ ನೀರನ್ನು ಕೊಡಲು ಮುಂತಾಗಿದೆ.
ಈ ಯೋಜನೆ ಅನುಷ್ಠಾನಗೊಂಡು ಕರೆ, ಕಲ್ಯಾಣಿಗಳಿಗೆ ನೀರು ತುಂಬಬೇಕಾದರೆ ಜಿಲ್ಲಾ ಆಡಳಿತ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲೇಬೇಕಾಗಿದೆ. ಜಿಲ್ಲೆಗೆ ಅನೇಕ ಉತ್ತಮ ಜಿಲ್ಲಾಧಿಕಾರಿಗಳು ಬಂದರೂ ಕೆರೆಗಳ ಅಭಿವೃದ್ಧಿ ಸಾಧ್ಯವಾಗಿಲ್ಲ, ರಾಜಕೀಯ ಒತ್ತಡ ಇನ್ನಿತರ ಕಾರಣಗಳಿಂದ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಬದ್ಧತೆ ತೋರಿದ ಅಧಿಕಾರಿಗಳು ಜಿಲ್ಲೆಯಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಿಲ್ಲ. ಹಾಲಿ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರಿಗೂ ಕೆರೆಗಳ ತಂಟೆಗೆ ಹೋಗದಂತೆ ಕೆಲವು ಪ್ರಭಾವಿಗಳು ದಮಕಿ ಹಾಕಿದ್ದರು. ಆದರೆ,ಇದಕ್ಕೆ ಜಗ್ಗದೆ ಕೆರೆಗಳ ಒತ್ತುವರಿ ತೆರುವಿಗೆ ಮುಂದಾಗಿದ್ದರು. ಕಲ್ಯಾಣಿಗಳನ್ನು ಶ್ರಮದಾನ ಮೂಲಕ ಪುನಶ್ಚೇತನಗೊಳಿಸಿದರ ಫಲದಿಂದಾಗಿ ಈಗ ಕನಿಷ್ಠ 50ಕ್ಕೂ ಹೆಚ್ಚು ಕಲ್ಯಾಣಿಗಳಲ್ಲಿ ಮಳೆಯ ನೀರು ನಿಂತು ಜಾನುವಾರುಗಳಿಗೆ ಕುಡಿಯಲು ನೀರು ಸಿಗುವಂತಾಗಿದೆ.
ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳು ವರ್ಗಾವಣೆ ಎಂಬ ದಾಳಕ್ಕೆ ಸಿಕ್ಕಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರ್ಗಮಿಸುವುದು ಸಹಜ. ಡಾ.ಡಿ.ಎಸ್. ವಿಶ್ವನಾಥ್ ಅವರನ್ನು ಮುಖ್ಯಮಂತ್ರಿಗಳು ಬಿಬಿಎಂಪಿಯ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾಯಿಸಿದ್ದು ಇವರ ಜಾಗಕ್ಕೆ ಶಿವಸ್ವಾಮಿ ಎಂಬುವರು ಬುಧವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ.
ದಲಿತ ಸಮುದಾಯಕ್ಕೆ ಸೇರಿದ ಶಿವಸ್ವಾಮಿ ಜಿಲ್ಲೆಯ ದಲಿತರ ಪರಿಸ್ಥಿತಿ ಅರಿತು ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕಾರ್ಯದ ಜತೆಗೆ ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕಾಗಿದೆ.
ಅಂತರ್ಜಲ ಅಭಿವೃದ್ಧಿಯೇ ನೂತನ ಜಿಲ್ಲಾಧಿಕಾರಿಗೆ ದೊಡ್‌ಡ ಸವಾಲು ಆಗಿದೆ, ಎತ್ತಿನ ಹೊಳೆ ಯೋಜನೆಗೆ ಶೀಘ್ರವೇ ಚಾಲನೆ ಸಿಗುವುದರಿಂದ ಅಷ್ಟರಲ್ಲಿ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿಪಡಿಸಲು ಸಮರೋಪಾದಿಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಸ್ಥೆಗಳಿಂದಾಗಿ ನಗೆಪಾಟಲಿಗೆ ಗುರಿಯಾಗಿದೆ, ಕಪ್ಪು ಪಟ್ಟಿ ಸೇರಲು ಅರ್ಹವಾಗಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಮೇಜರ್ ಸರ್ಜರಿ ಆಗಬೇಕಾಗಿದೆ.
ನೂತನ ಜಿಲ್ಲಾಧಿಕಾರಿ ಶಿವಸ್ವಾಮಿ ಅವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಸರ್ಕಾರಿ ಸೇವೆಯಿಂದ ನಿರ್ಗಮಿಸುತ್ತಿರುವುದರಿಂದ ಹೆಚ್ಚಿನ ನಿರೀಕ್ಷೆ ಮಾಡುವುದು ಕಷ್ಟ-ಸಾಧ್ಯ. ಆದರೆ, ಮನಸ್ಸಿದ್ದರೆ ಮಾರ್ಗ ಎಂಬಂತೆ ನೂತನ ಜಿಲ್ಲಾಧಿಕಾರಿಗಳು ನೀರು, ಕೃಷಿ, ಹೈನುಗಾರಿಕೆ, ವಸತಿ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾದರಿ ಜಿಲ್ಲಾಧಿಕಾರಿಯಾಗಲಿ ಎಂಬುದು ಎಲ್ಲರ ಆಶಯವಾಗಿದೆ.
-ಪಾ.ಶ್ರೀ. ಅನಂತರಾಮ್