ಪಾಲಿಟೆಕ್ನಿಕ್ಗಳಲ್ಲಿ ಕ್ಯಾರಿ ಓವರ್ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಕೋಲಾರ , ಜು. 23
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕ್ಯಾರಿ ಓವರ್ ಪದ್ಧತಿ ಜಾರಿ ಹಾಗೂ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜೂನಿಯರ್ ಕಾಲೇಜಿನಿಂದ ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಕುಳಿತು ಬೇಡಿಕೆ ಈಡೇರಿಸಲು ಒತ್ತಾಯಿಸಿದರು.
ಡಿಪ್ಲೋಮಾ ಕೋರ್ಸ್ ವಿದ್ಯಾರ್ಥಿಗಳಿಗೆ ಪದವಿ ರೀತಿಯಲ್ಲಿ ಸಂಪೂರ್ಣವಾಗಿ ಮೂರು ವರ್ಷ ಮುಂದಿನ ತರಗತಿಗಳಿಗೆ ಹಾಜರಾಗಲು ಮತ್ತು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದ ಒಟ್ಟು 291 ಪಾಲಿಟೆಕ್ನಿಕ್ಗಳಲ್ಲಿ 81 ಸರ್ಕಾರಿ,43 ಅನುಧಾನಿತ ಮತ್ತು 167 ಖಾಸಗಿ ಪಾಲಿಟೆಕ್ನಿಕ್ಗಳಿದ್ದು ಮುಂದಿನ ಸೆಮಿಸ್ಟರ್ಗೆ ಮುಂದುವರಿಯಲು ಅರ್ಹತೆ ಹೆಸರಿನಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಒಂದು ವರ್ಷದಲ್ಲಿ ಒಟ್ಟು 14 ವಿಷಯಗಳಲ್ಲಿ 4 ಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಮುಂದಿನ ವರ್ಷಕ್ಕೆ ಪ್ರವೇಶ ನೀಡಬಾರದೆಂಬುದು ನಿಯಮವನ್ನು ಜಾರಿಗೊಳಿಸಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ವಿದ್ಯಾರ್ಥಿಗಳಿಗೆ ಹೊರೆಯಾಗುವಷ್ಟು ಕಠಿಣವಾದ ಪಠ್ಯಕ್ರಮವನ್ನು ಡಿಟಿಇಯು ರೂಪಿಸಿದೆ. ವಿದ್ಯಾರ್ಥಿಗಳು ರಾಜ್ಯದಲ್ಲಿ ಹೊಸ ಪಠ್ಯ ಕ್ರಮಕ್ಕನುಗುಣವಾಗಿ ಭೋಧನೆ ಮಾಡುವ ಅರ್ಹ ಉಪನ್ಯಾಸಕರ ಕೊರತೆಯಿಂದಾಗಿ ಅಧ್ಯಯನಕ್ಕೆ ಬೇಕಾಗುವ ಸಾಮಗ್ರಿಗಳು ಸಿಗುತ್ತಿಲ್ಲ ಎಂದು ಅಪಾದಿಸಿದರು.
ಆರು ತಿಂಗಳ 1 ಸೆಮಿಸ್ಟರ್ನ್ನು ಸಮರ್ಪಕವಾಗಿ ನಡೆಸದೆ 3 ತಿಂಗಳಿಗೆ ಮುಗಿಸುವುದರಿಂದ ಶೇ.40 ರಷ್ಟು ಪಾಠ ಪೂರ್ಣಗೊಂಡಿರುವುದಿಲ್ಲ, ಡಿಟಿಇಯು ಅವೈಜ್ಞಾನಿಕವಾಗಿ ಪರೀಕ್ಷೆ ನೀತಿ ರೂಪಿಸಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಜಿಲ್ಲಾ ಯುವ ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ. ಸುರೇಶಗೌಡ, ಎಸ್.ಎಫ್.ಐನ ಜಿಲ್ಲಾ ಸಹ ಕಾರ್ಯದರ್ಶಿ ಸಿ. ಅಮರೇಶ್, ನಗರ ಸಂಚಾಲಕ ಮುಸ್ತಾಫ್, ರವಿಚಂದ್ರ, ಲಾವಣ್ಯ, ಮೀನಾ, ಸ್ವಪ್ನ, ಅನಿತಾ, ಶ್ರೀನಿವಾಸಮೂರ್ತಿ, ರಾಘವೇಂದ್ರ, ನಾಗರಾಜ್ ಪ್ರತಿಭಟನೆಯಲ್ಲಿದ್ದರು.