ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ
ಕೋಲಾರ: ಕಲ್ಯಾಣಿಗಳಿಗೆ ಮರು ಜೀವ ನೀಡುವ ಮೂಲಕ ಕಲ್ಯಾಣಾಧಿಕಾರಿ ಎಂಬ ಬಿರುದಿಗೆ ಪಾತ್ರರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರು ಬೆಂಗಳೂರಿಗೆ ವರ್ಗಾವಣೆಯಾಗಿರುವ ಹಿನ್ನಲೆಯಲ್ಲಿ ಬಂಗಾರಪೇಟೆ ತಾಲೂಕಿನ ಪಟ್ಣ ಗ್ರಾಮಸ್ಥರು ಭಾರ್ವವೂರ್ಣ ಕೃತಜ್ಞತೆಯೊಂದಿಗೆ ಬೀಳ್ಕೊಟ್ಟರು. ಕಳೆದ ವರ್ಷ ಮೇ 3ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಅಂತರ್ಜಲ ಸಮಸ್ಯೆ ನಿವಾರಣೆಗಾಗಿ ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಸಮಾಜಮುಖಿ ಅಧಿಕಾರಿಯಾಗಿ ಮೆಚ್ಚುಗೆ ಗಳಿಸಿರುವ ಡಾ. ವಿಶ್ವನಾಥ್ ಅವರು ಸೋಮವಾರ ಸಂಜೆ ಗ್ರಾಮಸ್ಥರು ಆಹ್ವಾನದ ಮೇರೆಗೆ ಪಟ್ಣ ಗ್ರಾಮಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು, ವಿದ್ಯಾರ್ಥಿಗಳು ಅದ್ಧೂರಿ ಸ್ವಾಗತ ನೀಡಿ, ಗ್ರಾಮದ ಕಲ್ಯಾಣಿಯ ಅಭಿವೃದ್ಧಿಗೆ ಕಾರಣಕರ್ತರಾದ ಜಿಲ್ಲಾಧಿಕಾರಿಗೆ ಹೃದಯ ಸ್ಪರ್ಶಿ ಸನ್ಮಾನ ನೀಡಿ ಗೌರವಿಸಿದರು. ವಿಶ್ವನಾಥ್ ಅವರನ್ನು ಗ್ರಾಮದ ಹೊರವಲಯದಿಂದ ಮಂಗಳವಾದ್ಯಗಳ ಸಮೇತ ನೂರಾರು ಸಂಖ್ಯೆಯ ಶಾಲಾ ಮಕ್ಕಳು, ಸ್ತ್ರೀಶಕ್ತಿ ಸಂಘದವರು, ಗ್ರಾಮಸ್ಥರು ಸ್ವಾಗತಿಸಿದರು. ಕಲ್ಯಾಣಿಯ ಸ್ವಚ್ಛತೆಗೆ ಶ್ರಮದಾನ ಮಾಡಿರುವ ಶಾಲಾ ಮಕ್ಕಳೇ ಇದರ ಸಂರಕ್ಷಣೆಗೆ ಮುಂದಾಗುವಂತೆ ಡಾ.ವಿಶ್ವನಾಥ್ ಸಲಹೆ ನೀಡಿದರು. ತಮ್ಮ ಅವಧಿಯಲ್ಲಿ 102 ಕಲ್ಯಾಣಿಗಳ ಪುನರುಜ್ಜೀವನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ವಿ. ವೆಂಕಟೇಶಮೂರ್ತಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾರಾಯಣಗೌಡ, ತಾ.ಪಂ ಇ.ಒ ಕೆ.ಎಸ್.ಭಟ್, ನಗರ ಯೋಜನಾ ವಿಭಾಗದ ರಾಮಮೂರ್ತಿ, ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮತ್ತಿತರರು ಇದ್ದರು.