ಸಂಗೀತ, ನಾಟ್ಯದಿಂದ ಮನಸ್ಸಿನ ಹತೋಟಿ: ಡಾ.ಕೃಷ್ಣಮೂರ್ತಿ
ಕ.ಪ್ರ.ವಾರ್ತೆ , ಚಿಂತಾಮಣಿ , ಜು. 23
ಅಧ್ಯಾತ್ಮ ಭಕ್ತಿ ಸಂಗೀತಕ್ಕೆ ಕೈವಾರ ಕೇಂದ್ರವಾಗಲಿ ಎಂದು ಹಿರಿಯ ಸಂಗೀತ ವಿದ್ವಾಂಸ, ಸಂಗೀತ ಕಲಾನಿಧಿ ಡಾ. ನೇದನೂರಿ ಕೃಷ್ಣಮೂರ್ತಿ ಹೇಳಿದರು.
ಕೈವಾರದ ಗುರುಪೂಜಾ ಸಂಗೀತೋತ್ಸವದ 3ನೇ ದಿನದ ಗುರುಪುಜಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಯುವಜನತೆಗೆ ಮನಸ್ಸಿನ ಮೇಲೆ ಹಿಡಿತವಿಲ್ಲ. ಸಂಗೀತ ಮತ್ತು ನಾಟ್ಯದಿಂದ ಮನಸ್ಸು ಸ್ಥಿರವಾಗುತ್ತದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಲು ಅವರಿಗೆ ಸೂಕ್ತ ಸಲಹೆಗಳನ್ನು ನೀಡಬೇಕಾಗಿದೆ. ಅದಕ್ಕಾಗಿ ಪಾಠ ಶಾಲೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಕೈವಾರ ಕ್ಷೇತ್ರದಲ್ಲಿ ಸಂಪ್ರದಾಯ ಭಜನೆಗೆ ಪ್ರಾಮುಖ್ಯತೆಯನ್ನು ನೀಡುವಂತಹ ಶಾಲೆ ಪ್ರಾರಂಭಿಸಬೇಕಾಗಿದೆ ಎಂದರು.
ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ ಮಾತನಾಡಿ, ಭಾರತದ ಸನಾತನ ಧರ್ಮದಲ್ಲಿ ಗುರುಗಳು, ಸಂತರಿಗೆ ಪೂಜ್ಯಸ್ಥಾನ ಕಲ್ಪಿಸಲಾಗಿದೆ. ಗುರುಪೂರ್ಣಿಮೆಯಂದು ವಿಶೇಷವಾಗಿ ಗುರುಗಳ ಸೇವೆ ಮಾಡುವುದು ನಮ್ಮ ಕರ್ತವ್ಯ. ಅವರ ಸಂದೇಶ ಎಲ್ಲರೂ ಅನುಸರಿಸಬೇಕು ಎಂದರು.
ಗುರುಪೂಜೆ ಅಂಗವಾಗಿ ವಿದ್ವಾಂಸರಿಂದ ಗೋಷ್ಠಿ ಗಾಯನ ಮತ್ತು ನಾದಸ್ವರ-ತವಿಲ್ ವಾದನ ನಡೆಯಿತು. ಸುಮಾರು 500ಕ್ಕೂ ಹೆಚ್ಚು ನಾದಸ್ವರ ಡೋಲು ವಿದ್ವಾಂಸರು ಭಾಗವಹಿಸಿದ್ದು ವಿಶೇಷವಾಗಿತ್ತು.
ಗುರುಪೂರ್ಣಿಮಾ ಪ್ರಯುಕ್ತ ಯೋಗಿನಾರೇಯಣ ಯತೀಂದ್ರ ತಾತಯ್ಯ ಅವರಿಗೆ ಅಭಿಷೇಕ, ರಾಜೋಪಚಾರ,ಅಷ್ಟಾವಧಾನ ಸೇವೆ ಸಮರ್ಮಣೆ ಮಾಡಲಾಯಿತು.
ಗುರುಪೂರ್ಣಿಮೆ ಪ್ರಯುಕ್ತ ಬೆಳಗಿನಿಂದಲೇ ಸದ್ಗುರು ಯೋಗಿನಾರೇಯಣ ತಾತಯ್ಯನವರ ದೇವಾಲಯದಲ್ಲಿ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿಸಿದರು. ನಂತರ ನಡೆದ ಗುರುಪೂಜಾ ಮಹೋತ್ಸವದಲ್ಲಿ ಸದ್ಗುರು ತಾತಯ್ಯ ಅವರಿಗೆ ವಿವಿಧ ಫಲ ಪುಷ್ಪ, ಪುನಗು, ಜವ್ವಾಜಿ ಕೇಸರಿ ಅರ್ಪಿಸಿ ಗುರುಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭ 'ಅಮರನಾರೇಯಣಂ ಶತಕಂ' ಕೃತಿಯನ್ನು ನೇದನೂರಿ ಕೃಷ್ಣಮೂರ್ತಿ ಮತ್ತು ಹೊಳೆಪಟ್ಟಿ ಸುಬ್ರಮಣ್ಯಂ ಬಿಡುಗಡೆ ಮಾಡಿದರು.
ಪೂಜೆ ನಂತರ ನಾಡಿನ ಪ್ರಸಿದ್ಧ ವಿದ್ವಾಂಸರಿಂದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯ ಅವರು ವಿರಚಿತ ಕೃತಿಗಳ ಗೋಷ್ಠಿ ಗಾಯನ ಏರ್ಪಡಿಸಲಾಗಿತ್ತು. ಎಸ್.ವಿ. ಗಿರಿಧರ್ ನೇತೃತ್ವದಲ್ಲಿ ತಾಳವಾದ್ಯ ಕಚೇರಿ, ಡಾ. ಸುಮ ಸುಧೀಂದ್ರ ಅವರಿಂದ ವೀಣಾವಾದನ, ಎಂ.ಎಸ್. ವಿದ್ಯಾ ಗಾಯನ, ಕೆ.ಎಸ್.ನಾಗಭೂಷಣಯ್ಯ ಅವರಿಂದ ಪಿಟೀಲು ಸೋಲೋ ಕಾರ್ಯಕ್ರಮವಿತ್ತು. ಸಂಜೆ ವಿದ್ಯಾಭೂಷಣ್ ಅವರ ಗಾಯನ ಶ್ರೋತೃಗಳ ಮನಸೂರೆಗೊಂಡಿತು. ತಿರುಚಿಯ ಡಾ. ಎ.ಕೆ.ಸಿ.ನಟರಾಜನ್ ಅವರಿಂದ ಕ್ಲಾರಿಯೋನೆಟ್ ವಾದನ, ಆರ್.ಕೆ. ಪದ್ಮನಾಭ್, ತಿರುಪತಿಯ ಬಾಲಕೃಷ್ಣಪ್ರಸಾದ್, ತುಮಕೂರು ಸಾಗರ್ ತಂಡದಿಂದ ಭರತನಾಟ್ಯ ಕಾರ್ಯಕ್ರಮಗಳು ಮನಮೋಹಕವಾಗಿತ್ತು.