ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಗರಸಭೆ ವಿರುದ್ಧ ದೂರು ದಾಖಲು

Vishwanath S
Updated On : 31 Jul 2013, 12:35 pm

ಕನ್ನಡಪ್ರಭ ವಾರ್ತೆ, ಕೋಲಾರ, ಜು.30
ನಗರದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದಕ್ಕೆ ನಗರಸಭೆಯ ಅಧಿಕಾರಿಗಳು ಕಾರಣವೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜು ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ನಗರಕ್ಕೆ ಸೋಮವಾರ ಭೇಟಿ ನೀಡಿದ್ದ ಲೋಕಾಯುಕ್ತ ಡಾ.ವೈ. ಭಾಸ್ಕರ್ ರಾವ್ ಅವರಿಗೆ ದೂರು ಸಲ್ಲಿಸಿರುವ ಅವರು  ಕೋಲಾರದ ಅಂತರಗಂಗೆ ರಸ್ತೆಯ ಕುವೆಂಪು ಪಾರ್ಕ್ ಪಕ್ಕದಲ್ಲಿ ನಿರ್ಮಿಸಿರುವ ದೊಡ್ಡ ಮೋರಿಯಲ್ಲಿ ಅನೇಕ ವರ್ಷಗಳಿಂದ ಹೂಳು ತುಂಬಿಕೊಂಡು ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದಂತಾಗಿದೆಯಲ್ಲದೆ ಕೊಳಚೆ ನೀರು ತುಂಬಿಕೊಂಡು ದುರ್ವಾಸನೆಯಿಂದ ನಾರುತ್ತಿರುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷವೇ ತಾವು ಕೋಲಾರ ನಗರಸಭೆಯ ಆಯುಕ್ತರಿಗೆ ಹಾಗೂ ಕೋಲಾರದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಲಾಗಿದ್ದು ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಲೋಕಾಯುಕ್ತರನ್ನು ಕೋರಿದ್ದಾರೆ.ನಗರದ ಕಠಾರಿಪಾಳ್ಯದ ನಾಗರಕುಂಟೆ ಪುನಶ್ಚೇತನ ಕಾರ್ಯವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸುಮಾರು 11 ತಿಂಗಳ ಹಿಂದೆ ಪ್ರಾರಂಭಿಸಿ ಶ್ರಮದಾನದ ಮೂಲಕ ನಾಗರಕುಂಟೆಯನ್ನು ಸ್ವಚ್ಛಗೊಳಿಸಿದ್ದರೂ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದೆ ಸ್ಥಗಿತಗೊಂಡಿದೆ. ಇದರ ಪರಿಣಾಮ ನೀರು ಸಂಗ್ರಹಣೆಗೆ ಯೋಗ್ಯವಾದ ನಾಗರಕುಂಟೆ ಸುತ್ತಲೂ ಹಾಕಿರುವ ಮಣ್ಣಿನ ರಾಶಿಯ ಕಾರಣ ಸುತ್ತಮುತ್ತಲಿನ ಮನೆಗಳಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ.
ಕೋಲಾರದ ಟೇಕಲ್ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ಪುಷ್ಕರಿಣಿಯನ್ನು ಪುನಶ್ಚೇತನ ಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಚಾಲನೆ ನೀಡಿ ಕೆಲಸವನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಈಗ ಇದರಲ್ಲಿ ಕೊಳಚೆ ನೀರು ತುಂಬಿಕೊಂಡು, ಗಿಡಗಂಟೆಗಳು ಬೆಳೆದಿರುವುದರಿಂದ ಸುತ್ತಲಿನ ಪರಿಸರವನ್ನು ಹಾಳು ಮಾಡಲಾಗಿದ್ದು ಸಂಚರಿಸುವ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಕ್ತ ದುಷ್ಪರಿಣಾಮ ಉಂಟಾಗಿರುತ್ತದೆ ಎಂದು ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement