ಪೋಷಕರು ಆಂಗ್ಲ ಶಾಲೆ ವ್ಯಾಮೋಹ ಬಿಡಲಿ
ಬಾಗೇಪಲ್ಲಿ: ಶಿಕ್ಷಕರ ಕೊರತೆ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮುಖಂಡ ಜೆ.ಕೆ. ಆನಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಚೇಳೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಣಿಗ ಸುಬ್ಬಮ್ಮ ಮತ್ತು ನರಸಿಂಹಯ್ಯಶೆಟ್ಟಿ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಪೋಷಕರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇರುವುದಿಲ್ಲ ಎಂಬ ತಪ್ಪು ಕಲ್ಪನೆಯಿಂದ ಹಾಗೂ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ. ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹೆಚ್ಚು ಒಲವು ತೋರುತ್ತಾರೆ.
ಹಿಂತಿರುಗಿ ನೋಡಿ: ಸುಮಾರು 10-15 ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಅನೇಕರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಆದರೆ, ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಹಾಗೂ ಶಾಲೆಗಳಿಗೆ ಮೂಲ ಸೌಲಭ್ಯಗಳ ಕೊರತೆಯಿಂದ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಇದರಿಂದ ಖಾಸಗಿ ಶಾಲೆಗಳು ವೃದ್ಧಿಯಾಗುತ್ತಿವೆ ವಿಷಾದ ವ್ಯಕ್ತಪಡಿಸಿದರು.
ಬರದ ನಾಡಲ್ಲಿ ಎಲ್ಲವೂ ಕಷ್ಟ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಬಹುತೇಕ ಪೋಷಕರು ರೈತರು, ಕೂಲಿ ಕೆಲಸ ಮಾಡುವವರೇ ಹೆಚ್ಚಾಗಿದ್ದಾರೆ. ಈ ಭಾಗದಲ್ಲಿ ಸತತವಾಗಿ ಕ್ಷಾಮಕ್ಕೆ ತುತ್ತಾಗಿರುವುದರಿಂದ ಇವರಿಗೆ ಒಂದು ಹೊತ್ತು ಊಟ ಸಿಗುವುದೂ ಕಷ್ಟ. ಇನ್ನು ಮಕ್ಕಳಿಗೆ ನೋಟ್ ಪುಸ್ತಕ ಸೇರಿದಂತೆ ಓದುವ ಸಾಮಗ್ರಿಗಳನ್ನು ಕೊಡಿಸುವುದು ಕಷ್ಟ ಎಂದರು.
ವಿಶೇಷ ಸವಲತ್ತು ಒದಗಿಸಿ: ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳೂ ಸಹ ಒಳ್ಳೆಯ ಶಿಕ್ಷಣ ಪಡೆಯಬೇಕಾದರೆ ಅವರಿಗೆ ಮೊದಲು ಮೂಲ ಸೌಲಭ್ಯಗಳ ಜೊತೆಗೆ ಓದಲು ಬೇಕಾದ ಪರಿಕರ ಒದಗಿಸಬೇಕು. ಈ ಬಗ್ಗೆ ಸರ್ಕಾರ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಗೆಗಳನ್ನು ಜಾರಿಗೆ ತರಬೇಕು ಎಂದರು.
ಅನಗತ್ಯ ಖರ್ಚು ಬೇಡ: ಇತ್ತೀಚಿನ ದಿನಗಳಲ್ಲಿ ಉಳ್ಳವರು ಸಭೆ -ಸಮಾರಂಭ, ಬಾಡೂಟದ ಹೆಸರಿನಲ್ಲಿ ಅನಗತ್ಯವಾಗಿ ಹಣ ವ್ಯಯ ಮಾಡುತ್ತಿದ್ದಾರೆ. ಇಂತಹ ಹಣವನ್ನು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಉಪಯೋಗಿಸಿದರೆ ಶಾಲೆಗಳು ಅಭಿವೃದ್ಧಿ ಜೊತೆಗೆ ಸಾಕ್ಷರತಾ ಪ್ರಮಾಣ ಹೆಚ್ಚಾಗಿ ಗ್ರಾಮೀಣ ಭಾಗಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಗ್ರಾಪಂ ಮಾಜಿ ಸದಸ್ಯ ಎಸ್.ಎ. ಸುಬ್ರಮಣ್ಯಂ, ಶಿಕ್ಷಕರಾದ ನಾಗಮಣಿ, ಲಕ್ಷ್ಮೀ, ವೆಂಕಟರಾಮರೆಡ್ಡಿ, ಶ್ರೀನಿವಾಸ್ ಉಪಸ್ಥಿತರಿದ್ದರು.