ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪ ಬಿಟ್ಟ ರೈಲಿಗೆ ಮಾರ್ಗ ತೋರುವರೆ ಖರ್ಗೆ?

Vishwanath S
Updated On : 31 Jul 2013, 12:35 pm

ಕೆಜಿಎಫ್: ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಬಿಟ್ಟ ರೈಲಿಗೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹಳಿ ಹಾಕಿಸುವರೇ...
ಕೆಜಿಎಫ್ ಕ್ಷೇತ್ರದ ಲಕ್ಷಾಂತರ ಜನರ 40 ವರ್ಷಗಳ ಬೇಡಿಕೆಯಾಗಿದ್ದ ಮಾರಿಕುಪ್ಪಂ-ಕುಪ್ಪಂ ರೈಲು ಮಾರ್ಗ ಕಲ್ಪಿಸಲು ಸುಮಾರು 40 ವರ್ಷಗಳಿಂದ ಕೇಂದ್ರ ಸರ್ಕಾರ ಹಾಗೂ ಕೋಲಾರ ಜಿಲ್ಲೆಯವರಾದ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಕ್ಷೇತ್ರದ ಜನರು ಹಲವಾರು ಪತ್ರಗಳನ್ನು ಮತ್ತು ಮನವಿಗಳನ್ನು ಸಲ್ಲಿಸುವ ಮೂಲಕ ಗಮನ ಸೆಳೆದಿದ್ದರು.
277 ಕೋಟಿ ಮಂಜೂರು: ಕೆ.ಹೆಚ್.ಮುನಿಯಪ್ಪ ಈ ಹಿಂದೆ ರಾಜ್ಯ ರೇಲ್ವೆ ಸಚಿವರಾಗಿದ್ದಾಗ ರಾಜ್ಯದ ಕೆಲ ಮಾರ್ಗಗಳಿಗೆ ಬ್ರಾಡ್‌ಗೇಜ್ ಲೈನ್‌ಗಳಿಗೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಿಸಿದ್ದು, ಇದೇ ಸಂದರ್ಭದಲ್ಲಿ   ಮಾರಿಕುಪ್ಪಂ-ಕುಪ್ಪಂ ಮಾರ್ಗ ಕಲ್ಪಿಸಲು ಕಳೆದ 2011-12 ಹಾಗೂ 2012-13 ನೇ ಸಾಲಿನ ಬಜೆಟ್‌ನಲ್ಲಿ ಒಟ್ಟಾರೆ ರು. 277 ಕೋಟಿ ಹಣ ಮಂಜೂರು ಮಾಡಲಾಗಿದೆ.
ಅಡಿಗಲ್ಲು ಹಾಕಲಾಗಿತ್ತು: ಈ ಹಿನ್ನಲೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ದಕ್ಷಿಣ ವಲಯ ಅಧಿಕಾರಿಗಳು ಬೆಂಗಳೂರಿನ ರೇಲ್ವೆ ಇಲಾಖೆ ಅಧಿಕಾರಿಗಳು ಕೆಜಿಎಫ್‌ನ ಮಾರಿಕುಪ್ಪಂ  ರೇಲ್ವೆ ನಿಲ್ದಾಣದಿಂದ ಕುಪ್ಪಂನ ಸರ್ವೆ ಕೆಲಸಕ್ಕೆ ಅಡಿಗಲ್ಲು ನೆಡುವ ಮೂಲಕ ಚಾಲನೆ ನೀಡಲಾಗಿತ್ತು.
ವಿವಿಧ ಇಲಾಖೆಯೊಂದಿಗೆ ಒಡಂಬಡಿಕೆ: ಸುಮಾರು 24 ಕಿ.ಮೀ ಮಾರಿಕುಪ್ಪಂ ನಿಂದ ಕುಪ್ಪಂ ವರೆಗೆ ಸರ್ವೆ ಕೆಲಸ ಪೂರ್ಣಗೊಂಡಿದ್ದು 24 ಕಿ.ಮೀ ಭೂಮಿಯಲ್ಲಿ 20 ಕಿ.ಮೀ ವರೆಗೆ ಸರ್ಕಾರದ ಜಮೀನು ಇದ್ದು ಉಳಿದ 4 ಕಿ.ಮೀ ಖಾಸಗಿ ಕೃಷಿ ಜಮೀನಿದೆ. ಈ ಖಾಸಗಿ ಜಮೀನಿಗೆ ಸಂಬಂಧಿಸಿ ಸರ್ಕಾರ ಇತ್ಯರ್ಥ ಮಾಡಿಕೊಳ್ಳಬೇಕಿದೆ.
ಅರಣ್ಯ ಇಲಾಖೆ, ಬೆಸ್ಕಾಂ, ಲೋಕೋಪಯೋಗಿ ಇಲಾಖೆಯೊಂದಿಗೆ, ರಾಜ್ಯ ಸರ್ಕಾರ ಆದೇಶ, ರೇಲ್ವೆ ಇಲಾಖೆ ಅನುಮತಿ ಮುಂತಾದ ಸಮಸ್ಯೆಗಳ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಕೆಲ ಇಲಾಖೆಯಿಂದ ಎನ್‌ಒಸಿ ನೀಡಲಾಗಿದೆ. ಆದರೆ, ಇತರೆ ಕಾರ್ಯಾಚರಣೆಗೆ ಮುಂದಾಗಲು ಕೇಂದ್ರ ರೇಲ್ವೆ ರಾಜ್ಯ ಸಚಿವ ಮಲ್ಲಿಕಾರ್ಜುನ ಖರ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ.
ಮಾರಿಕುಪ್ಪಂ-ಕುಪ್ಪಂ ರೈಲ್ವೆ ಮಾರ್ಗದ ಸರ್ವೆ ಪ್ರಕಾರ 3 ರಿಂದ 5 ಸೇತುವೆಗಳು, ದೊಡ್ಡಕಲ್ಲಹಳ್ಳಿ ಮತ್ತು ದ್ರಾವಿಡ ಯುನಿವರ್ಸಿಟಿ ಬಳಿ ಎರಡು ರೇಲ್ವೆ ನಿಲ್ದಾಣ, ಉರಿಗಾಂನಲ್ಲಿ ಮಾದರಿ ರೈಲ್ವೆ ನಿಲ್ದಾಣ ಮತ್ತು ಟಿಕೆಟ್ ಬುಕಿಂಗ್ ಕಚೇರಿ ಬರಲಿವೆ ಎಂದು ಸರ್ವೆನಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಕಾಮಗಾರಿ ಕೆಲಸ ಮುಗಿದು ಕೆಜಿಎಫ್ ಕ್ಷೇತ್ರದ ಲಕ್ಷಾಂತರ ಜನರ ಬೇಡಿಕೆಯನ್ನು ಈಡೇರಿಸಲು ರೈಲ್ವೆ ಸಚಿವ ಮಲ್ಲಿಕಾರ್ಜುನ ಖಾರ್ಗೆ ಅವರು ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಈ ಭಾಗದ ಜನರ ಆಸೆಯಾಗಿದೆ.

- ಆರ್.ರಜನೀಕಾಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement