ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಟೋಗಳಿಗೆ ಕಡಿವಾಣ, ಸುಗಮ ಸಂಚಾರಕ್ಕೆ ಆಗ್ರಹ

Vishwanath S
Updated On : 1 Aug 2013, 12:29 pm

ಬಾಗೇಪಲ್ಲಿ: ಪಟ್ಟಣದಲ್ಲಿ ಅನಧಿಕೃತ ಆಟೋಗಳಿಗೆ ಕಡಿವಾಣ ಹಾಕುವ ಮೂಲಕ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ತಹಸೀಲ್ದಾರ್ ಎಂ.ಎ. ಪದ್ಮ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಜಿ. ವೆಂಕಟೇಶ್, ಪಟ್ಟಣದಲ್ಲಿ ದಿನೇ ದಿನೆ ಬಸ್, ಕಾರು, ಟೆಂಪೋ ಲಾರಿ ಮತ್ತು ಆಟೋ ಸೇರಿದಂತೆ ವಿವಿಧ ರೀತಿಯ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಆದರೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸರು ಸಂಚಾರ ವ್ಯವಸ್ಥೆಗೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದರಿಂದ ಪಟ್ಟಣದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ವೃದ್ಧರು, ಅಂಗವಿಕಲರು ರಸ್ತೆಯಲ್ಲಿ ಓಡಾಡಲು ತುಂಬಾ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಆಟೋಗಳದೇ ಕಾರುಬಾರು. ಅದರಲ್ಲಿಯೂ ಹೆಚ್ಚಿನ ಆಟೋಗಳು ಆಂಧ್ರಪ್ರದೇಶದಲ್ಲಿ ನೋಂದಣಿಯಾಗಿದ್ದು ಅವುಗಳಿಗೆ ಸರಿಯಾದ ದಾಖಲೆಗಳು, ಆಟೋ ಚಾಲಕರಿಗೆ ಲೈಸನ್ಸ್ ಇರುವುದಿಲ್ಲ. ಇಷ್ಟೆಲ್ಲ ಇಲ್ಲಿ ನಡೆಯುತ್ತಿದ್ದರೂ ಸಾರಿಗೆ ಇಲಾಖೆಯ(ಆರ್.ಟಿ.ಓ) ಅಧಿಕಾರಿಗಳು ಹಾಗೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ದೂರಿದರು.
ಬಹುತೇಕ ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವುದರಿಂದ ಈಗಾಗಲೇ ಆನೇಕ ಆಟೋಗಳು ಉರುಳಿಬಿದ್ದಿವೆ. ಅಪಘಾತಕ್ಕೆ ಒಳಗಾದ ಆಟೋಗಳಿಗೆ ವಿಮೆ ಹಾಗೂ ಪರವಾನಗಿ ಇಲ್ಲದೆ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಎಂಬುದು ಮರಿಚೀಕೆಯಾಗಿದೆ. ತಕ್ಷಣ ಪರವಾನಗಿ ಇಲ್ಲದ ಆಟೋಗಳಿಗೆ ಕಡಿವಾಣ ಹಾಕಿ ಸುಗಮ ಸಂಚಾರದ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಜನಪರ ವೇದಿಕೆಯ ಗೌರವಾಧ್ಯಕ್ಷ ಸಿ.ಎನ್. ಅದಿನಾರಾಯಣ ಹಾಗೂ ಮುಖಂಡರಾದ ಶಂಕರ್, ಮುದ್ದಕೃಷ್ಣ, ಕೊತ್ತಕೋಟೆ ವೆಂಕಟರವಣಪ್ಪ, ನರಸಿಂಹಪ್ಪ, ಹರಿ, ರವಿ, ಚೌಡಪ್ಪ, ಗೂಳೂರು ಅದಿನಾರಾಯಣಪ್ಪ, ಲಕ್ಷಣರೆಡ್ಡಿ, ನರಸಿಂಹಪ್ಪ, ಮೂರ್ತಿ, ರವೀಂದ್ರ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement