ಕ್ಯಾಟ್ ಫಿಶ್ಗಳ ನಾಶ
ಚಿಕ್ಕಬಳ್ಳಾಪುರ: ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕ್ಯಾಟ್ ಫಿಶ್ ತಳಿಯ ಮೀನು ಸಾಕಾಣಿಕೆ ನಿಷೇಧಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ನಿಷೇಧಕ್ಕೆ ಎಷ್ಟೇ ಕ್ರಮ ವಹಿಸಿದರೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ, ಅಧಿಕಾರಿಗಳ ಕಣ್ಣಿಗೆ ಮಣ್ಣು ಎರೆಚಲಾಗುತ್ತಿದೆ.
ತಾಲೂಕಿನ ಹಾರೋಬಂಡೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕ್ಯಾಟ್ ಫಿಶ್ಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ನಟೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ದಾಳಿ ನಡೆಸಿ ಕ್ಯಾಟ್ ಫಿಶ್ಗಳನ್ನು ನಾಶಪಡಿಸಿರುವುದು ಇದಕ್ಕೆ ನಿದರ್ಶನವಾಗಿದೆ.
ಹಾರೋಬಂಡೆ ಗ್ರಾಮದ ಹುಸೇನ್ ಎಂಬುವವರು ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮೀನು ಸಾಕಾಣಿಕೆ ಸ್ಥಳದ ಮೇಲೆ ದಾಳಿ ನಡೆಸಿದ ತಹಸೀಲ್ದಾರ್ ಮತ್ತು ಅಧಿಕಾರಿಗಳು, ಮೀನು ಸಾಕಾಣಿಕೆ ಮಾಡುತ್ತಿದ್ದ ಹಳ್ಳದಲ್ಲಿನ ನೀರನ್ನು ಹೊರಕ್ಕೆ ಬಿಟ್ಟು ಹಳ್ಳಕ್ಕೆ ಜೆಸಿಬಿ ಯಂತ್ರದ ಮೂಲಕ ಮಣ್ಣು ತುಂಬಿಸಿ ಮೀನುಗಳನ್ನು ನಾಶಪಡಿಸಿದರು.
ತಾಲೂಕಿನ ರಾಮದೇವರಗುಡಿ ಹಾಗೂ ರೆಡ್ಡಿಗೊಲ್ಲವಾರಹಳ್ಳಿಯಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದ ಸ್ಥಳದ ಮೇಲೆ ಸಹ ದಾಳಿ ನಡೆಸಿ ಸಾಕಾಣಿಕೆ ಮಾಡುತ್ತಿದ್ದವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಯಾಜ್ ಬೇಗ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.