ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪಕ್ಷೇತರ ಶ್ರೀನಿವಾಸ್‌ಗೆ 30ನೇ ವಾರ್ಡ್ ನಗರಸಭೆ ಲಾಟರಿ

Vishwanath S
Updated On : 1 Aug 2013, 12:30 pm

ಚಿಕ್ಕಬಳ್ಳಾಪುರ: ಸದ್ದಿಲ್ಲದೇ ಮತ ಪ್ರಚಾರ, ಮತದಾನವೂ ಮುಗಿದು ಹೋಗಿದ್ದ ನಗರದ 30 ನೇ ವಾರ್ಡಿನ ನಗರಸಭಾ ಸದಸ್ಯರ ಆಯ್ಕೆ ಚುನಾವಣೆಯ (ಅಂಬೇಡ್ಕರ್ ಕಾಲೋನಿ) ಮತಎಣಿಕೆ ಕಾರ್ಯದ ಕೊನೆ ಕ್ಷಣದಲ್ಲಿ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಪಂದ್ಯದಂತೆ ಬುಧವಾರ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತು.
ಕಣದಲ್ಲಿದ್ದ ಇಬ್ಬರು ಅಭ್ಯರ್ಥಿಗಳು ಸಮಾನವಾಗಿ ಮತಗಳಿಸುವ ಮೂಲಕ ಕೆಲ ಸಮಯ ಅಚ್ಚರಿ ಅಲೆಯುಂಟು ಮಾಡಿದರು. ಆದರೆ, ಅದೃಷ್ಟ ಪರೀಕ್ಷೆಯ ಲಾಟರಿ ಸ್ಪರ್ಧೆಯಲ್ಲಿ ನಗರಸಭಾ ಮಾಜಿ ಸದಸ್ಯ, ಕಾಂಗ್ರೆಸ್ ಅಭ್ಯರ್ಥಿ ಸೋತು ಕೈ ಸುಟ್ಟುಕೊಂಡರೆ, ಪಕ್ಷೇತರ ಅಭ್ಯರ್ಥಿ ಗೆಲವನ್ನು ಸಾಧಿಸುವ ಮೂಲಕ ನಗೆಬೀರಿದರು.
ನಗರದ ಅಂಬೇಡ್ಕರ್ ಕಾಲೋನಿಯ 30 ನೇ ವಾರ್ಡಿನ ನಗರಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಗರಸಭಾ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ ಸ್ಪರ್ಧಿಸಿದ್ದರು. ಅದ್ದೂರಿ ಪ್ರಚಾರವಿಲ್ಲದ ಕಾರಣ ಅಷ್ಟಾಗಿ ಚುನಾವಣೆ ಗಮನ ಸೆಳೆದಿರಲಿಲ್ಲ.
ಈ ನಡುವೆ ಜು.28 ರಂದು ಅಂಬೇಡ್ಕರ್ ಕಾಲೋನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಕಾರ್ಯ ನಡೆದಿದ್ದು ಶೇ.85.34 ರಷ್ಟು ಮತದಾನವಾಗಿತ್ತು. ಬುಧವಾರ ನಗರದ ಮಿನಿಸೌಧದಲ್ಲಿ ಮತ ಎಣಿಕೆ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾರಿಗೆ ಗೆಲವು ವರಿಸಲಿದೆ ಎಂಬ ಕುತೂಹಲದಲ್ಲಿ ಕಾಲೋನಿಯ ನಿವಾಸಿಗಳು, ತಮ್ಮ ನಾಯಕ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾನೆ ಎಂಬ ಭಾವನೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿ ಮುಂದೆ ಜಮಾಯಿಸಿದ್ದರು.
ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ನಟೇಶ್ ಮತ್ತು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪರವರ ನೇತೃತ್ವದಲ್ಲಿ ಬೆಳಿಗ್ಗೆ ಮತ ಎಣಿಕೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕೆಲವೇ ಕೆಲವು ಕ್ಷಣದಲ್ಲಿ ಅಭ್ಯರ್ಥಿಗಳು ಗಳಿಸಿರುವ ಮತಗಳ ಪ್ರಮಾಣವನ್ನು ತಿಳಿಸಿದ ಎಲೆಕ್ಟ್ರಾನಿಕ್ ಮತಯಂತ್ರ ಎಲ್ಲರಿಗೂ ಶಾಕ್ ನೀಡಿತು.
ಕಾಂಗ್ರೆಸ್ ಅಭ್ಯರ್ಥಿ ಮಿಲ್ಟನ್ ವೆಂಕಟೇಶ್ 518 ಮತಗಳನ್ನು ಮತ್ತು ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಸಹ 518 ಮತಗಳನ್ನು ಪಡೆದಿದ್ದಾರೆ ಎನ್ನುವುದನ್ನು ಸೂಚಿಸಿತು. ಅಭ್ಯರ್ಥಿಗಳು ಡ್ರಾ ಫಲಿತಾಂಶ ಬಂದ ಕಾರಣ ಕೆಲ ಸಮಯ ಗೊಂದಲಕ್ಕೀಡಾದರು. ಬಳಿಕ ತಹಸೀಲ್ದಾರ್ ನಟೇಶ್, ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ತಿಳಿಸಿದರು.
ಆದರೆ, ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್, ಮತಯಂತ್ರದಲ್ಲಿ ದೋಷವಾಗಿರಬಹುದು. ಪುನಃ ಮತ ಎಣಿಕೆ ಮಾಡಬೇಕು. ಆಗ ಸರಿಯಾದ ಫಲಿತಾಂಶ ಬರಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಲಾಟರಿ ಆಯ್ಕೆಗೆ ಸಹಮತ ವ್ಯಕ್ತಪಡಿಸಿದರು. ಈ ಕಾರಣದಿಂದ ಚುನಾವಣಾಧಿಕಾರಿಗಳು ಶ್ರೀನಿವಾಸ್ ಅವರನ್ನು ಒಪ್ಪಿಸಿದರು. ಕೊನೆಗೆ ಬಾಕ್ಸ್‌ನಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರುಗಳ ಚೀಟಿ ಹಾಕಿ, ಲಾಟರಿ ಎತ್ತಲಾಯಿತು. ಆಗ ವಿಜಯದ ಮಾಲೆ ಶ್ರೀನಿವಾಸ್ ಅವರ ಕೊರಳಿಗೆ ಬಿತ್ತು. ದಲಿತ ಮುಖಂಡರು ಮತ್ತು ಅಭಿಮಾನಿಗಳು ನೂತನ ನಗರಸಭಾ ಸದಸ್ಯನಿಗೆ ಜೈಕಾರಗಳೊಂದಿಗೆ ಹೂವಿನ ಮಾಲೆ ಹಾಕಿ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement