ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆದರಿಸುವ ಪುಢಾರಿಗಳ ವಿರುದ್ಧ ನಿರ್ಭಯವಾಗಿ ದೂರು ಕೊಡಿ

Vishwanath S
Updated On : 1 Aug 2013, 12:31 pm

ಬಾಗೇಪಲ್ಲಿ: ಸರ್ಕಾರಿ ಕಚೇರಿಗಳಿಗೆ ಬಂದು ಗಲಾಟೆ, ಬ್ಲಾಕ್‌ಮೇಲ್ ಸೇರಿದಂತೆ ವಿವಿಧ ರೀತಿ ಬೆದರಿಕೆಗಳನ್ನು ಹಾಕುವಂತಹ ಪುಢಾರಿಗಳಿಗೆ ಬಗ್ಗದೇ ಅವರ ವಿರುದ್ಧ ನಿರ್ಭಯವಾಗಿ ದೂರು ನೀಡಬೇಕೆಂದು ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪುರಸಭೆಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾನೂನು ಪ್ರಕಾರವಾಗಿ ಕೆಲಸ ಮಾಡಲು ಅಧಿಕಾರಿಗಳು ಭಯಪಡಬೇಕಾಗಿಲ್ಲ. ಅದೇ ರೀತಿ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸುವವರಿಗೆ ಬಗ್ಗಬೇಕಾಗಿಲ್ಲ. ತಾವು ತಪ್ಪು ಮಾಡದಿದ್ದಾಗ ಭಯಪಡದೇ ಬೆದರಿಕೆ ಹಾಕುವವರ ವಿರುದ್ಧ ದೂರು ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಟೆಂಡರ್ ವಿಷಯದಲ್ಲಿ ಲೋಕಾಯುಕ್ತ ಅಧಿಕಾರಿ ಮತ್ತು 19 ನೇ ವಾರ್ಡಿನ ಸಲೀಂ ಎಂಬುವರ ನಡುವೆ ಜಟಾಪಟಿಯೂ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಟೆಂಡರ್ ಪಡೆಯುವ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳು ಲಂಚವನ್ನು ತೆಗೆದುಕೊಂಡು ಟೆಂಡರ್ ಪ್ರಕ್ರಿಯೆಯನ್ನು ಪಕ್ಕದ ತಾಲೂಕಿಗೆ ನೀಡಿದ್ದಾರೆ ಎಂದು ಸಲೀಂ ಎಂಬುವವರು ಏರುದನಿಯಲ್ಲಿ ಮಾತನಾಡಿದಾಗ, ಸಾರ್ವಜನಿಕರ ಸಭೆಯಲ್ಲಿ ಗಲಾಟೆ ಮಾಡುವುದು ಸರಿಯಲ್ಲ. ಒಂದು ವೇಳೆ ಇಲ್ಲಿ ಸಮರ್ಪಕವಾಗಿ ಪ್ರತಿಕ್ರಿಯೆ ಸಿಗದಿದ್ದಾಗ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು ಅಥವಾ ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಬಹುದೆಂದು ಗರಂ ಆಗಿಯೇ ಮಂಜೇಗೌಡ ಎಚ್ಚರಿಕೆ ನೀಡಿದರು.
ಇದಕ್ಕೆ ಆಕ್ರೋಶಗೊಂಡ ಸಲೀಂ ಬಹತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ನಮಗೆ ನ್ಯಾಯ ಸಿಗುತ್ತಿಲ್ಲವೆಂದು ಲೋಕಾಯುಕ್ತರ ಬಳಿ ಬಂದರೆ ನೀವು ನಮ್ಮಿಂದ ಕೇವಲ ದೂರಿನ ಅರ್ಜಿಯನ್ನು ಪಡೆದುಕೊಂಡು ಹೋಗುತ್ತೀರಿ, ನಮ್ಮ ಸಮಸ್ಯಗೆ ಪರಿಹಾರ ಸಿಗುತ್ತಿಲ್ಲ. ಈ ವಿಚಾರವಾಗಿ ನಾವು ನಿಮ್ಮಲ್ಲಿ ಕೇಳಿದರೆ ಜೈಲಿಗೆ ಕಳುಹಿಸುತ್ತೇನೆಂದು ಹೇಳುತ್ತೀರಾ ಇದು ಯಾವ ನ್ಯಾಯ. ನಿಮ್ಮ ಹತ್ತಿರ ಕೆಲಸ ಆಗಲಿಲ್ಲ ಎಂದರೆ ಲಿಖಿತ ರೂಪದಲ್ಲಿ ಬರೆದುಕೊಡಿ ಎಂದು ಒತ್ತಾಯಿಸಿದರು. ಆಗ ಮದ್ಯೆ ಪ್ರವೇಶಿಸಿದ ಎಸ್ಸೈ ಮುನಿರೆಡ್ಡಿ ಸಲೀಂರವರನ್ನು ಸಮಾಧಾನಪಡಿಸಿದರು.
ಚಿತ್ರಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸಲಾಗುತ್ತಿದ್ದು ಅಧಿಕಾರಿಗಳು ಏನು ಕ್ರಮ ಜರುಗಿಸುತ್ತಿಲ್ಲ ಎಂದು ಕರವೇ ಮುಖಂಡ ಬಿಟಿಸಿ ಸೀನಾ ದೂರಿದರು.
ಸಿಐಟಿಯು ತಾಲೂಕು ಉಪಾಧ್ಯಕ್ಷ ಬಿ.ಆಂಜನೇಯರೆಡ್ಡಿ ದೂರು ನೀಡಿ, ತಾಲೂಕಿನಲ್ಲಿ ಬಿಸಿಯೂಟ ಆಹಾರ ಪದಾರ್ಥಗಳನ್ನು ಟೆಂಡರ್‌ದಾರರು ಸಾಗಾಣಿಕೆ ಮಾಡದೆ ಮರುಗುತ್ತಿಗೆ ನೀಡಿ ಸಾಗಾಣಿಕೆ ಮಾಡುತ್ತಿದ್ದಾರೆ, ಶಾಲೆಗಳಿಗೆ ಸೇರಬೇಕಾದ ಆಹಾರ ಪದಾರ್ಥಗಳು ಸರಿಯಾಗಿ ತಲುಪುತ್ತಿಲ್ಲ. ಅಧಿಕೃತ ವಾಹನಗಳ ಬದಲಾಗಿ ಬೇರೊಂದು ವಾಹನಗಳಲ್ಲಿ ಆಹಾರ ಪದಾರ್ಥಗಳನ್ನು ಸಾಗಿಸುವುದು ಕಾನೂನಿಗೆ ವಿರುದ್ದ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಎಂ.ಎ.ಪದ್ಮ, ಉಪ ತಹಸೀಲ್ದಾರ್ ಎಸ್.ಮುನಿರಾಮಯ್ಯ, ತಾಪಂ ಇಓ ಇಂದ್ರೇಶ್, ಪುರಸಭೆ ಮುಖ್ಯಾಧಿಕಾರಿ ಆರ್.ಶ್ರೀಕಾಂತ್, ಸಿಡಿಪಿಒ ಲಕ್ಷ್ಮೀದೇವಮ್ಮ, ಜೆ.ಕೆ.ಕೃಷ್ಣಮೂರ್ತಿ, ಡಾ,ವೆಂಕಟೇಶ್, ಡಾ. ರವಿಕುಮಾರ್, ಡಾ. ಮಂಜೇನಾಯಕ್ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement