ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯಾರು?
ಚಿಂತಾಮಣಿ: ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಭ್ಯರ್ಥಿ ಬಿ.ಜನಾರ್ಧನರೆಡ್ಡಿ ಹಾಗೂ ಬಾಲಕರ ಪದವಿ ಪೂರ್ವ ಉಪನ್ಯಾಸಕ ಮುನಿರೆಡ್ಡಿ ಮಧ್ಯೆ ನೇರ ಸ್ಪರ್ಧೆಯಿದ್ದು ಈ ಇಬ್ಬರಲ್ಲಿ ಯಾರು ಅದೃಷ್ಟಶಾಲಿಗಳೆಂದು ತಿಳಿಯಲು ಗುರುವಾರ ನಡೆಯುವ ಚುನಾವಣೆ, ಫಲಿತಾಂಶದೆಡೆ ತೀವ್ರ ಕುತೂಹಲ ಮೂಡಿದೆ.
ರಾಜ್ಯ ಸರ್ಕಾರಿ ನೌಕರರ ತಾಲೂಕು ಶಾಖೆಗೆ 2013-18 ನೇ ಸಾಲಿನ ಅವಧಿಯಗೆ ಕಳೆದ 22 ರಂದು ನಡೆದ ಚುನಾವಣೆಯಲ್ಲಿ 22 ವಿವಿಧ ಇಲಾಖೆಯ ಸದಸ್ಯರು ಆಯ್ಕೆಯಾಗಿದ್ದಾರೆ. 29 ಸದಸ್ಯರು ಗುರುವಾರದಂದು ಪಟ್ಟಣದ ಮೀನುಗಾರಿಕೆ ಕಚೇರಿಯಲ್ಲಿ ಮತದಾನ ಮಾಡಲಿದ್ದಾರೆ. ಈ ಪೈಕಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಇ.ಸಿ.ಓ ಬಿ.ಜನಾರ್ಧನರೆಡ್ಡಿರವರಿಗೂ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮುನಿರೆಡ್ಡಿ ನಡುವೆ ನೇರ ಪೈಪೋಟಿಯಿದೆ.
ಒಕ್ಕಲಿಗರ ಸಂಘ ಬೆಂಬಲ: ರಾಜ್ಯ ಒಕ್ಕಲಿಗರ ಸಂಘದ ಮುಖಂಡರೊಬ್ಬರು ಸರ್ಕಾರಿ ನೌಕರರ ಅಭ್ಯರ್ಥಿಗೆ ಬೆಂಬಲಿಸಿದ್ದರೆ, ಮತ್ತೊಂದು ಕಡೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಬೆಂಬಲ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರೋತ್ಸಾಹ ಇರುವುದರಿಂದ ಬಹುತೇಕ ಬಿ.ಜನಾರ್ಧನರೆಡ್ಡಿ ಗೆಲ್ಲಲು ಅನುಕೂಲವಾಗುತ್ತಿದೆ ಎಂಬ ಅಭಿಪ್ರಾಯವೂ ಹಲವು ಸದಸ್ಯರಿಂದ ಕೇಳಿ ಬರುತ್ತಿದೆ.
ಪೈಪೋಟಿ: ಗುರುವಾರದಂದು ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯಲಿದ್ದು, ಆಕಾಂಕ್ಷಿಗಳು ಈಗಾಗಲೇ ಒಂದೆರಡು ಸುತ್ತಿನ ಮಾತುಕತೆ ನಡೆಸಿ, ಸದಸ್ಯರುಗಳನ್ನು ತಮ್ಮ ಕಡೆಗೆ ಸೆಳೆಯಲು ಆಸೆ ಆಮಿಷಗಳನ್ನು ತೋರಿ ಲಾಬಿಗಳು ಸಹ ನಡೆಯುತ್ತಿರುವುದಾಗಿ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಮತ್ತೊಂದು ಕಡೆ ಬಿ.ಜನಾರ್ಧನರೆಡ್ಡಿಗೆ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲವಿದೆಯೆಂದು ಕೇಳಿಬರುತ್ತಿದೆ.
ಮಾಜಿ ಶಾಸಕ ಎಂ.ಸಿ.ಸುಧಾಕರ್ ಬೆಂಬಲದ ಅಭ್ಯರ್ಥಿಯೆಂದೇ ಗುರುತಿಸಿಕೊಂಡಿರುವ ಮುನಿರೆಡ್ಡಿ ಸಹ ಗೆಲ್ಲಲು ಕಸರತ್ತು ನಡೆಸಿ ಶತಾಯ ಗತಾಯ ಅಧ್ಯಕ್ಷ ಸ್ಥಾನವನ್ನು ಪಡೆಯಲು ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ವಾರದಿಂದ ಹಲವು ಸದಸ್ಯರುಗಳಿಗೆ ಹಲವು ಭಾಗಗಳಲ್ಲಿ ಗುಂಡು ತುಂಡು ಪಾರ್ಚಿಗಳು ಸಹ ನಡೆಸಿ ಗೆಲ್ಲಲು ತೀವ್ರ ಪೈಪೋಟಿ ಸಹ ನಡೆಸುತ್ತಿದ್ದಾರೆ ಎನ್ನಲಾಗಿದೆ. ಏನೇ ಆಗಲಿ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ರಂಗೇರಿದ ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮಿ ಯಾರ ಕೊರಳಿಗೆ ಒಲಿಯಲಿದ್ದಾಳೆ ಎಂಬುದು ಕುತೂಹಲ ಮೂಡಿಸಿದೆ.
-ಎನ್.ಬಾಬು