ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅನ್ನದಾತನಿಗೆ ಸರ್ಕಾರಗಳು ಆದ್ಯತೆ ನೀಡಲಿ

Rashmi Kasaragodu
Updated On : 24 Jun 2013, 12:56 pm

ಕನ್ನಡಪ್ರಭವಾರ್ತೆ   ಕೋಲಾರ    ಜೂ.23
ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಬದುಕು ಹಸನಾಗಲು ಆಳುವ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುವಲ್ಲಿ ವಿಫಲವಾಗಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್‌ಸದಸ್ಯ ಎಂ.ವಿ.ರಾಜಶೇಖರನ್ ವಿಷಾದಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರೈತರ ಜಾಗೃತಿ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರೈತರ ವೈವಿಧ್ಯಮಯ ಉತ್ಸವ 2013 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾಯಿತ ಸರ್ಕಾರಗಳು ರೈತನ ಅಭಿವೃದ್ಧಿಗೆ ಪೂರಕವಾದ ಕೃಷಿ ನೀತಿಗಳನ್ನು ಅನುಷ್ಠಾನಗೊಳಿಸಿದಾಗ ಮಾತ್ರ ದೇಶ ಅಭಿವೃದ್ಧಿಯಾಗುವುದರ ಜತೆಗೆ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ.70 ರಷ್ಟು ಜನ ಇಂದಿಗೂ ಕೃಷಿರಂಗದಲ್ಲಿ ತೊಡಗಿಸಿಕೊಂಡಿದ್ದು, ಸರ್ಕಾರ ರೈತರಿಗೆ ಬೇಕಾದ ಸವಲತ್ತುಗಳ ಜತೆಗೆ ಉತ್ತಮ ಜೀವನ ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕಾದ ಜವಾಬ್ದಾರಿ ಇದೆ ಎಂದರು.
ಯಾವ ದೇಶದಲ್ಲಿ ಆಹಾರ ಕೊರತೆ ಉಂಟಾಗುತ್ತದೆಯೋ ಅಂತಹ ದೇಶ ಅಭಿವೃದ್ಧಿಯಲ್ಲೂ ಹಿನ್ನಡೆ ಕಾಣಬೇಕಾಗುತ್ತದೆ. ಜನಪ್ರತಿನಿಧಿಗಳು ಸರ್ಕಾರಗಳ ಮೇಲೆ ಒತ್ತಡ ತಂದು ರೈತರ ಪರವಾಗಿ ಸರಿಯಾದ ನೀತಿಗಳನ್ನು ಅನುಷ್ಠಾನಕ್ಕೆ ತರದಿದ್ದ ಪಕ್ಷದಲ್ಲಿ ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾರತ ಮರಳು ಭೂಮಿ: ದೇಶದ ಶೇ.68 ರಷ್ಟು ಪ್ರದೇಶದಲ್ಲಿ ಮಳೆಯಿಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಮರಳು ಭೂಮಿಯಾಗುವ ಸಂಭವವಿದೆ ಎಂದು ನಾಸಾ ವರದಿ ಮಾಡಿದ್ದು, ಇದು ಮುಂದಿನ ಪೀಳಿಗೆಗೆ ಕಷ್ಟದ ದಿನಗಳು ಕಾಣಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜೂ.24 ರಂದು ನೀರಾವರಿ ಸಭೆ: ಶಾಸಕ ಆರ್ .ವರ್ತೂರ್ ಪ್ರಕಾಶ್ ಮಾತನಾಡಿ, ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಬಗ್ಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ಶಾಸಕರನ್ನು ಒಳಗೊಂಡ ಸಭೆಯನ್ನು ಜಲ ಸಂಪನ್ಮೂಲ ಇಲಾಖೆಯ ಸಚಿವ ಎಂ.ಬಿ.ಪಾಟೀಲ್ ಅವರು ಜೂ.24 ರಂದು ಬೆಂಗಳೂರಿನ ಕಾವೇರಿ ಭವನದಲ್ಲಿ ಕರೆದಿರುವುದು ಆಶಾದಾಯಕ ವಿಚಾರವಾಗಿದ್ದು ಈ ಸಭೆಯಲ್ಲಿ ತಾವು ಕೋಲಾರ ಜಿಲ್ಲೆಯ ಜನತೆ ಸಮಸ್ಯೆಯನ್ನು ಸಚಿವರಿಗೆ ಮನವರಿಕೆ ಮಾಡುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ ಈಗಾಗಲೇ ರಾಜ ಕಾಲುವೆಗಳ ತೆರವಿಗೆ 1.50 ಕೋಟಿಯಷ್ಟು ಹಣವನ್ನು ಮೀಸಲಿಟ್ಟಿದ್ದು, ಶಾಶ್ವತ ನೀರಾವರಿ ಯೋಜನೆ ಜಾರಿಯಾಗುವಷ್ಟರಲ್ಲಿ ರಾಜ ಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಮಾಜಿ ಅಧ್ಯಕ್ಷ ವೈ.ಸುರೇಂದ್ರಗೌಡ, ತೋಟಗಾರಿಕೆ ವಿಶೇಷ ಅಧಿಕಾರಿ ಡಾ.ವಿ.ನಾಚೇಗೌಡ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರೈತರ ಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ವಿ.ರೆಡ್ಡಿ ವಹಿಸಿದ್ದರು.
ಜಿಪಂ ಅಧ್ಯಕ್ಷೆ ಚೌಡೇಶ್ವರಿ ರಾಮು, ಎಪಿಎಂಸಿ ಅಧ್ಯಕ್ಷೆ ರಾಜೇಶ್ವರಿ, ಆದಾಯ ತೆರಿಗೆ ಸಹಾಯ ಆಯುಕ್ತ ಡಾ.ಆರ್.ಮೋಹನರೆಡ್ಡಿ, ತಾಂತ್ರಿಕ ಶಿಕ್ಷಣ ಇಲಾಖೆಯ ಎಚ್.ವಿ.ತಳವಾರ್, ರಾಜ್ಯ ಮಾಲಿನ್ಯ ನಿಯಂತ್ರಣ ನಿವೃತ್ತ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕೊತ್ತಂಬರಿ ಮಂಜುನಾಥ್, ಎ.ಅಪ್ಪಾಜಿಗೌಡ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರೈತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಯಿತು.


ಶಾಶ್ವತ ನೀರಾವರಿ ಯೋಜನೆ ಜಾರಿಯಾಗುವಷ್ಟರಲ್ಲಿ ರಾಜ ಕಾಲುವೆಗಳ ಒತ್ತುವರಿ ತೆರವು
ಟಿ ವರ್ತೂರ್ ಪ್ರಕಾಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement