ಅಪಾಯಕ್ಕೆ ಸಿಲುಕದಿರಿ: ಜನತೆಗೆ ಶಾಸಕ ಮನವಿ
ಕ.ಪ್ರ.ವಾರ್ತೆ ಮಾಲೂರು ಜೂ. 23
ಆನೆಗಳ ಹಿಂಡು ತಾಲೂಕಿನ ಕಸಬಾ ಹೋಬಳಿಯ ಗಡಿಭಾಗದಲ್ಲಿದ್ದು, ಯಾವೂದೇ ಕಾರಣಕ್ಕೂ ಜನರು ಆನೆಗಳ ಹಿಂಡು ನೋಡಲು ಹೋಗಿ ಅಪಾಯಕ್ಕೆ ಈಡಾಗದೆ ಅರಣ್ಯ ಇಲಾಖೆಯವರಿಗೆ ಸಹಕಾರ ನೀಡಬೇಕೆಂದು ಶಾಸಕ ಮಂಜುನಾಥ್ ಗೌಡರವರು ತಾಲೂಕಿನ ಜನತೆಯಲ್ಲಿ ಮನವಿ ಮಾಡಿದ್ದಾರೆ. ಭಾನುವಾರ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಂತರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಕೆಟ್ಟ ಕುತೂಹಲಕ್ಕಾಗಿ ಹೊಸಕೋಟೆಯ ಪತ್ರಕರ್ತ ಸೇರಿದಂತೆ ತಾಲೂಕಿನಲ್ಲಿ 4 ಜೀವವನ್ನು ಕಳೆದುಕೊಳ್ಳಲಾಗಿದೆ. ಹೆಚ್ಚು ಜನರು ವೀಕ್ಷಿಸಲು ಬರುವುದರಿಂದ ಆನೆಗಳು ದಿಕ್ಕು ತಪ್ಪುವ ಜೊತೆಯಲ್ಲಿ ಅರಣ್ಯ ಇಲಾಖೆಗೆ ಆನೆಗಳನ್ನು ನಿಯಂತ್ರಿಸಲು ತೊಂದರೆಯಾಗತ್ತಿದೆ ಎಂದರು.
ಈಗಾಗಲೇ ತಾಲೂಕಿನಲ್ಲಿ ಆನೆ ತುಳಿತಕ್ಕೆ ಸಿಕ್ಕಿ ಸತ್ತಿರುವ 3 ಮಂದಿ ಕುಟುಂಬದವರಿಗೂ ತಲಾ 5 ಲಕ್ಷ ಪರಿಹಾರ ಧನ ನೀಡಲಾಗುತ್ತಿದೆ ಎಂದ ಶಾಸಕರು ಪರಿಹಾರ ನೀಡುವುದಕ್ಕಿಂತ ಹೆಚ್ಚು ಜೀವವನ್ನು ಉಳಿಸಿಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ಸಹಕರಿಸುವಂತೆ ಜನತೆಯಲ್ಲಿ ಮನವಿ ಮಾಡಿದರು. ಆನೆಗಳು ತಾಲೂಕಿನಲ್ಲಿ ಅಡ್ಡಾದಿಡ್ಡಿ ತಿರುಗುತ್ತಿರುವ ಇಂತಹ ಸಂಧರ್ಭದಲ್ಲಿ ಇಲಾಖೆಗೆ ಹೆಲಿಕಾಪ್ಟರ್ ಅವಶ್ಯವಾಗಿ ಬೇಕಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದೂಡನೆ ಚರ್ಚಿಸುವುದಾಗಿ ಶಾಸಕ ಮಂಜುನಾಥ್ ಗೌಡ ತಿಳಿಸಿದರು.
ಜಿಲ್ಲಾ ಅರಣ್ಯಾಧಿಕಾರಿ ಮುನೇಗೌಡ ಮಾತನಾಡಿ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ 59 ಲಕ್ಷ ರು.ಗಳ ಪರಿಹಾರ ಧನ ವಿತರಿಸಲಾಗಿದೆ. ಇದರಲ್ಲಿ ಬೆಳೆ ಹಾಗೂ ಪ್ರಾಣ ಹಾನಿಯು ಸೇರಿದೆ ಎಂದರು.
ಈ ವರ್ಷದಲ್ಲಿ ಇದುವರೆಗೂ 75 ಜನ ಬೆಳೆ ಹಾನಿ ಹಾಗೂ ಗಾಯಾಳುಗಳು ನೀಡಿರುವ ಪರಿಹಾರ ಧನದ ಅರ್ಜಿಗಳು ಪರಿಶೀಲನೆಯಲ್ಲಿ ಇದೆ ಎಂದರು.
ಜಿಲ್ಲೆಯ ಗಢಿಭಾಗವಾದ ಮಾಲೂರು ತಾಲೂಕು ಪ್ರದೇಶಗಳಲ್ಲಿ ಕೃಷ್ಣಮೃಗ, ಚಿರತೆ, ಜಿಂಕೆ, ಸಾಂಬಾರ್, ಕರಡಿ, ಹೆಬ್ಬಾವು ಸೇರಿದಂತೆ ವಿವಿಧ ವರ್ಗಗಳ ಕಾಡು ಪ್ರಾಣಿಗಳು ಇದ್ದು,ಸೊರೆಕಾಯಿ ಪುರ ಕಾಡನ್ನು(12 ಹೆಕ್ಟರ್)ಕಾಡುಪ್ರಾಣಿಗಳ ಸುರಕ್ಷಿತ ಉದ್ಯಾನವನ ಎಂದು ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ತಲಾ 10 ಸಾವಿರ ಪರಿಹಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ಮಾತನಾಡಿ ಆನೆ ತುಳಿತಕ್ಕೆಸಿಕ್ಕ ಮೂವರಿಗೆ ಜಿ.ಪಂ.ವತಿಯಿಂದ ತಲಾ ಹತ್ತು ಸಾವಿರ ರು. ನೀಡುವುದಾಗಿ ತಿಳಿಸಿದರು.
ಎಸಿಎಫ್ ಪುಟ್ಟಣ ಮಾತನಾಡಿ ಇನ್ನೆರಡು ದಿನಗಳು ತಾಲೂಕಿನ ಕಸಬಾ ಹೋಬಳಿ ಸೇರಿದಂತೆ ಲಕ್ಕೂರು ಭಾಗದ ಚಿಕ್ಕತಿರುಪತಿ ಪ್ರದೇಶಗಳಲ್ಲಿ ಯಾರು ದನ-ಕರು ಹಾಗೂ ಕುರಿಗಳನ್ನು ಮೇಯಿಸದೆ ಮನೆಯಲ್ಲೇ ಇರುವಂತೆ ಮನವಿ ಮಾಡಿದ ಪುಟ್ಟಣ್ಣ ಪೊಲೀಸ್ ಇಲಾಖೆ ಅಪಾಯವಿರುವ ಗ್ರಾಮಗಳಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡುತ್ತಿದ್ದು, ಈ ಬಗ್ಗೆ ಅಲಕ್ಷ ಮಾಡದಂತೆ ಮನವಿ ಮಾಡಿದರು.
ಇನ್ನೆರಡು ದಿನದಲ್ಲಿ ಹೊಸಕೋಟೆ ಹಾಗೂ ಮಾಲೂರು ಅರಣ್ಯಾ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಆನೆಗಳನ್ನು ಬನ್ನೇರುಘಟ್ಟಕ್ಕೆ ಕಳುಹಿಸುವಂತೆ ಮಾಡಲಾಗುವುದು ಎಂದ ಪುಟ್ಟಣ್ಣ ರವರು ತೊಂದರೆ ಸಂಭವಿಸಿದ್ದಲಿ ಫೋ.ನಂ. 9448843024 ನ್ನು ಸಂಪರ್ಕಿಸುವಂತೆ ಕೋರಿದರು. ಸ್ಥಳೀಯ ಅರಣ್ಯಾಧಿಕಾರಿ ಸುಬ್ಬರಾವ್, ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್, ಎಸ್.ಐ. ಮೋಹನ್ ರೆಡ್ಡಿ ಇದ್ದರು.