ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುಡಿ ಕೈಗಾರಿಕೆ ಯೋಜನೆಗೆ ಹುಣಸೂರು ಆಯ್ಕೆ: ವಿಶ್ವನಾಥ್

Rashmi Kasaragodu
Updated On : 24 Jun 2013, 12:58 pm

ಹುಣಸೂರು:  ಕೇಂದ್ರ ಸರ್ಕಾರ ಗುಡಿ ಕೈಗಾರಿಕೆಯನ್ನು ನಂಬಿ ಬದುಕುತ್ತಿರುವ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಿದ್ದು, ಇದನ್ನು ಗ್ರಾಮೀಣ ಪ್ರದೇಶದದಲ್ಲಿ ಪರಿಚಯಿಸಲು ಹುಣಸೂರು ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಹುಣಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಳಿವಿನ ಸ್ಥಿತಿಗೆ ಬಂದಿರುವ ಕುಂಬಾರಿಕೆ, ತೆಂಗಿನ ನಾರಿನ ಬಳಕೆ, ಈಚಲು ಮರದಿಂದ ತಯಾರಿಸುವ ಹಲವಾರು ವಸ್ತುಗಳು, ಹೂವಿನ ಮಾರಾಟ, ಇದ್ದಿಲು ಉಪಯೋಗ, ಮರದ ಕೆತ್ತನೆಗಳಂತಹ ಕಲೆ ನಾಶವಾಗುತ್ತಿದ್ದು, ಇದನ್ನೆ ನಂಬಿಕೊಂಡು ಬದುಕಿರುವ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಸಹಭಾಗಿತ್ವ: ಬೆಂಗಳೂರಿನ ಐಡಿಯಾ- ಸಿಒಇ ಸಂಸ್ಥೆಯು ಗ್ರಾಮೀಣರಲ್ಲಿ ಬೇರೂರಿದ್ದ ಇಂತಹ ಕೈಗಾರಿಕೆಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ನಂತರದ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಉತ್ಪಾದನೆ ಹಾಗೂ ಮಾರುಕಟ್ಟೆ ನಿರ್ಮಿಸಲಾಗುವುದು. ಈ ಸಂಸ್ಥೆಯು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿ ಯಶಸ್ಸು ಸಾಧಿಸಿದೆ. ಅಲ್ಲದೆ, ರೈತರಲ್ಲಿ ಭರವಸೆ ಮೂಡಿಸಿದೆ ಎಂದರು.
ಮೈಸೂರು ಲೋಕಸಭಾ ಕ್ಷೇತ್ರದ ಹುಣಸೂರು ತಾಲೂಕಿನಲ್ಲಿ ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಪ್ರಾಯೋಗಿಕ ಕ್ಷೇತ್ರವನ್ನಾಗಿ ಆಯ್ದುಕೊಳ್ಳಲಾಗಿದೆ. ಶೀಘ್ರದಲ್ಲಿ ಸ್ತ್ರೀ ಶಕ್ತಿ ಸಂಘಗಳು ಹಾಗೂ ಇನ್ನಿತರ ಸಂಘ- ಸಂಸ್ಥೆಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement