ನಗರಸಭಾ ಆಯುಕ್ತರಿಗೆ ದಿಗ್ಬಂಧನ
ಚಿಂತಾಮಣಿ: ಪ್ರಭಾರ ನಗರಸಭಾ ಆಯುಕ್ತ ಗಂಗಣ್ಣ ಅವರು ಏಕಪಕ್ಷೀಯ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿ ಮಾಜಿ ಶಾಸಕ ಸುಧಾಕರ್ ಬೆಂಬಲಿತ ನಗರಸಭಾ ಸದಸ್ಯರು ಭಾನುವಾರ ನಗರಸಭೆಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರಭಾರ ನಗರಸಭಾ ಆಯುಕ್ತ ಗಂಗಣ್ಣ ಆಡಳಿತರೂಢ ನಗರಸಭಾ ಸದಸ್ಯರ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕುಡಿಯುವ ನೀರಿನ ವಿಷಯದಲ್ಲಿ ತಾರತಮ್ಯ ಮಾಡುತ್ತಿರುವುದಾಗಿ ಆರೋಪಿಸಿದ ನಗರಸಭಾ ಸದಸ್ಯರಾದ ಶ್ರೀನಾಥರೆಡ್ಡಿ, ದೇವರಾಜ್, ಭಾಸ್ಕರ್, ಇಲಿಯಾಜ್ ಪಾಷ, ರವಿ ಸೇರಿದಂತೆ ಇನ್ನೂ ಹಲವು ಮುಖಂಡರು ಕಚೇರಿಗೆ ಬೀಗ ಜಡಿದರು.
ಕುಡಿಯುವ ನೀರಿನ ಸಮಸ್ಯೆ ಪಟ್ಟಣದಲ್ಲಿ ತಾಂಡವವಾಡುತ್ತಿದ್ದರೂ ರಾಜಕೀಯ ದುರುದ್ದೇಶದಿಂದ ಹಾಲಿ ಶಾಸಕರ ಬೆಂಬಲಿತ ಹಲವು ಸದಸ್ಯರು ಸೇರಿ ಅಧಿಕಾರಿಗಳಿಗೆ ಧಮಕಿ ಹಾಕಿ ತಮ್ಮ ಕೈಗೊಂಬೆಗಳಾಗಿ ಮಾಡಿಕೊಂಡಿದ್ದಾರೆ.
ಬ್ರಾಹ್ಮಣರ ಬೀದಿ, ನಾರಸಿಂಹಪೇಟೆ, ಹಳೆ ಪೇಟೆ, ಆಂಜನೇಯ ಬೀದಿ ಸುತ್ತಮುತ್ತ, ವೆಂಕಟಗಿರಿಕೋಟೆ ಇನ್ನೂ ಹಲವು ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರಭಾರ ಆಯುಕ್ತ ಗಂಗಣ್ಣ ಕುಡಿಯುವ ನೀರನ್ನು ವ್ಯವಸ್ಥೆಗೊಳಿಸುವಲ್ಲಿ ವಿಫಲರಾಗಿದ್ದಾರೆ.
ನಗರಸಭಾ ಸದಸ್ಯರ ಪರವಾಗಿ ಕೆಲಸ ಮಾಡಿ ಬೋರ್ವೆಲ್ ಕೊರಸೆದೇ ಏಕಪಕ್ಷವಾಗಿ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸದಸ್ಯರು ಕಚೇರಿಯಲ್ಲೇ ಆಯುಕ್ತರನ್ನು ಕೂಡಿ ಹಾಕಿ ಧಿಕ್ಕಾರ ಕೂಗಿ ಕುಡಿಯುವ ನೀರು ವ್ಯವಸ್ಥೆಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿ ತಿಳಿದ ಘಟನಾ ಸ್ಥಳಕ್ಕೆ ಪೋಲೀಸ್ ಸಬ್‌ಇನ್ಸ್‌ಪೆಕ್ಟರ್ ಹಾಗೂ ಪೊಲೀಸರು ಆಗಮಿಸಿ ಪ್ರತಿಭಟನಾಗಾರರನ್ನು ಸಮಾಧಾನಗೊಳಿಸಲು ಯತ್ನಿಸಿದಾಗ ಸದಸ್ಯರು ಗರಂ ಆದರು.
ಬಡಾವಣೆಗಳಲ್ಲಿನ ಜನಸಾಮಾನ್ಯರು ನೀರಿಲ್ಲದೇ ಒಂದು ತಿಂಗಳಿಂದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒಬ್ಬ ಅಧಿಕಾರಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿರುವುದು ಸರಿಯಲ್ಲ.
ಏನೇ ಸಮಸ್ಯೆ ಇರಲಿ, ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಪ್ರಭಾರ ಆಯುಕ್ತ ಗಂಗಣ್ಣ ಶೀಘ್ರವೇ ಕೊಳವೆ ಬಾವಿ ಕೊರೆಸಿ ಇಲ್ಲವೇ ಟ್ಯಾಂಕರ್‌ಗಳ ಮುಖಾಂತರ ನೀರು ಹರಿಸಿ ವಾರದ ಒಳಗೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.