ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಯಲು ಸೀಮೆಗೆ ಬಾರೋ ಮಳೆರಾಯ...

Rashmi Kasaragodu
Updated On : 24 Jun 2013, 12:55 pm

 ಪಾ.ಶ್ರೀ.ಅನಂತರಾಮ್
ಕ.ಪ್ರ. ವಾರ್ತೆ   ಕೋಲಾರ   ಜೂ.23
ಉತ್ತರಾಖಂಡದಲ್ಲಿ ಬಿದ್ದ ಮಳೆಯಲ್ಲಿ ಶೇ.10ರಷ್ಟು ಮಳೆ ಬಯಲು ಸೀಮೆ ಪ್ರದೇಶಗಳಲ್ಲಿ ಸುರಿದಿದ್ದಲ್ಲಿ ರೈತರ ಮೊಗದಲ್ಲಿ ಸಂತಸ ಕಾಣುತ್ತಿತ್ತು. ಆದರೆ, ಮಳೆಯರಾಯನ ಅವಕೃಪೆಯಿಂದಾಗಿ ಅಂತರ್ಜಲ ಸಮಸ್ಯೆ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇನ್ನಿತರ ಬಯಲು ಸೀಮೆ ಜಿಲ್ಲೆಗಳ ಜನರು ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ತಲೆ ಮಾಡಿ ಕುಳಿತಿದ್ದಾರೆ.
ರಾಜ್ಯದ ಕರಾವಳಿ ಸೇರಿದಂತೆ ಕೆಲವು ಕಡೆ ಮಳೆಯಾಗುತ್ತಿದ್ದರೂ ಕೋಲಾರ ಸೇರಿದಂತೆ ಬಯಲು ಸೀಮೆ ಪ್ರದೇಶಗಳಲ್ಲಿ ಮಳೆ ಬಾರದಿರುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಕೈ ಹಾಕುವುದಕ್ಕೆ ಅಂಜಿದ್ದಾರೆ.
ಕಳೆದ 20 ದಿನಗಳ ಹಿಂದೆ ಬಿದ್ದ ಅಲ್ಪ ಸ್ವಲ್ಪ ಮಳೆಗೆ ಗರಿಗೆದರಿದ್ದ ಕೃಷಿ ಚುಟುವಟಿಕೆಗಳು ಮುಂಗಾರು ಮಳೆ ಅಭಾವದಿಂದ ಸ್ಥಗಿತಗೊಂಡಿವೆ. ರೈತರು ಬಿತ್ತನೆ ಬೀಜ ಹಾಗೂ ಗೊಬ್ಬರಗಳನ್ನು ಖರೀದಿ ಮಾಡಿ ಮಳೆಯಿಲ್ಲದೆ ಚಿಂತಾಕ್ರಾಂತರಾಗಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ 1.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು ಈವರೆಗೆ ಕೇವಲ 650 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈ ಬಾರಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಮುಂಗಾರು ಬೇಗನೆ ಪ್ರವೇಶ ಮಾಡಿತ್ತು, ರೈತರು ಮಳೆಯನ್ನು ನಂಬಿ ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದರು. ಆದರೆ, ಮಳೆ ನಿಂತಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಕೃಷಿ ಇಲಾಖೆ ಕೂಡ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದೆ. ಈ ಪೈಕಿ ತೊಗರಿ 220 ಕ್ವಿಂಟಲ್, ನೆಲಗಡಲೆ 2 ಸಾವಿರ ಕ್ವಿಂಟಲ್, ರಾಗಿ 1257 ಕ್ವಿಂಟಲ್, ಭತ್ತ 522 ಕ್ವಿಂಟಲ್ , ಮೆಕ್ಕೆ ಜೋಳ 10 ಕ್ವಿಂಟಲ್ ಸೇರಿ ಏಕದಳ, ದ್ವಿದಳ ಹಾಗೂ ಎಣ್ಣೆಕಾಳು ಸೇರಿ ಒಟ್ಟು 4055 ಕ್ವಿಂಟಲ್ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿತ್ತು. ಆದರೆ ಈವರೆಗೆ 1720 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ.
ಮೇ ತಿಂಗಳ ವಾಡಿಕೆ ಮಳೆ ಪ್ರಮಾಣ 84.20ರಷ್ಟಿದ್ದು, 82.54ರಷ್ಟು ಮಳೆಯಾಗಿತ್ತು. ರೈತರು ಮಳೆಯನ್ನು ನಂಬಿ ಪ್ರಮುಖವಾಗಿ ನೆಲಗಡಲೆಯನ್ನು ಹೆಚ್ಚಾಗಿ ಬಿತ್ತನೆ ಮಾಡುವುದಕ್ಕೆ ತಯಾರಿ ನಡೆಸಿದ್ದರಾದರೂ ಮಳೆ ಕೈಕೊಟ್ಟಿರುವುದರಿಂದ ಜಮೀನು ಕಡೆ ಹೋಗಲಾಗದೆ ಮೌನಕ್ಕೆ ಶರಣಾಗಿದ್ದಾರೆ.
ಮೋಡ ಮಳೆಯಾಗುತ್ತಿಲ್ಲ: ಜಿಲ್ಲೆಯಲ್ಲಿ ಜೂನ್‌ನಲ್ಲಿ ಸರಾಸರಿ ವಾಡಿಕೆ ಮಳೆ 52.80 ಮಿಮೀ, ಆದರೆ ಈವರೆಗೆ  25.78ಮಿಮೀ ಮಳೆಯಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇರುತ್ತದೆಯಾದರೂ ಮಳೆ ಆಗುತ್ತಿಲ್ಲ.
ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಕೆಲವು ಕಡೆ ಬಿತ್ತನೆ ಮಾಡಿದ್ದ ನೆಲಗಡಲೆ, ಎಳ್ಳು, ತೊಗರಿ ಮೊಳಕೆಯೊಡೆದಿದ್ದು, ಮಳೆ ಬಾರದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದ್ದಾರೆ.


 ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಗುರಿ
ತಾಲೂಕು    ಬಿತ್ತನೆಯ ಗುರಿ    ಬಿತ್ತನೆಯಾದ ಪ್ರದೇಶ
    (ಹೆಕ್ಟೇರ್‌ಗಳಲ್ಲಿ)    (ಹೆಕ್ಟೇರ್‌ಗಳಲ್ಲಿ)
ಬಂಗಾರಪೇಟೆ    23630    46
ಕೋಲಾರ    19115    189
ಮಾಲೂರು    16055    185
ಮುಳಬಾಗಲು    26075    220
ಶ್ರೀನಿವಾಸಪುರ    17125    -
ಒಟ್ಟು    1,02,000    640

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement