ಮೆರುಗು ತಂದ ಉದಯೋನ್ಮುಖರ ಕವಿತೆಗಳು
ಚಿಂತಾಮಣಿ: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉದಯೋನ್ಮುಖ ಕವಿಗಳು ಸಹ ಭಾಗವಹಿಸಿ ಅರ್ಥಪೂರ್ಣ ಹಾಗೂ ವಸ್ತುನಿಷ್ಠ ಸ್ವರಚಿತ ಕವನಗಳನ್ನು ವಾಚಿಸುವ ಮೂಲಕ ಕಾವ್ಯಾಸಕ್ತರಿಗೆ ಮುದ ನೀಡಿ, ಸಮ್ಮೇಳನಕ್ಕೆ ಹೊಸ ಮೆರಗು ತಂದುಕೊಟ್ಟರು. ಸಾಮಾನ್ಯವಾಗಿ ದೊಡ್ಡ ದೊಡ್ಡ ಕವಿಗೋಷ್ಠಿಗಳಲ್ಲಿ ಹಿರಿಯ ಕವಿಗಳಿಗೆ ಮಾತ್ರ ಅವಕಾಶ ನೀಡಿ ಉದಯೋನ್ಮುಖರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತದೆ. ಆದರೆ ಇಲ್ಲಿನ ಕಸಾಪ ಘಟಕವು ಕವಿಗೋಷ್ಠಿಯಲ್ಲಿ ಉದಯೋನ್ಮುಖರಿಗೂ ಸೂಕ್ತ ಅವಕಾಶ ಕಲ್ಪಿಸಿಕೊಟ್ಟು ಹೊಸ ಇತಿಹಾಸ ಹುಟ್ಟು ಹಾಕುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಹಿತ್ಯ ಸಮ್ಮೇಳನದ ಕವಿಗಳು ಕವಿಗೋಷ್ಠಿ ಕಾರ್ಯಕ್ರಮದಲ್ಲಿ 19 ಮಂದಿ ಭಾಗವಹಿಸಿದ್ದು ಅವರಲ್ಲಿ ಕೆ.ಎನ್.ಅಕ್ರಂಪಾಷ, ಅರುಣ, ಎನ್.ಕಾವ್ಯ, ಅಂಬರೀಶ್, ವಿ.ಚಲಪತಿ, ಅಕ್ಕಿಮಂಗಲ ಮಂಜುನಾಥ್ ಮುಂತಾದ ಉದಯೋನ್ಮುಖ ಕವಿಗಳು ಸಹ ಭಾಗವಹಿಸಿದ್ದರು. ಒಂದೇ ವೇದಿಕೆಯಲ್ಲಿ ಹಿರಿಯ ಹಾಗೂ ಕಿರಿಯ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದ್ದು, ಇದು ಹಳೇ ಬೇರು, ಹೊಸ ಚಿಗುರುಗಳ ಸಮಾಗದಂತೆ ಕಂಡುಬಂತು.